ಸಿಖ್ಖರು ಮಾಡುತ್ತಿರುವ ಸೇವಾ ಕಾರ್ಯವನ್ನು ಆರೆಸ್ಸೆಸ್ಸಿಗರೆಂದು ಬಿಂಬಿಸಿ ನಗೆಪಾಟಲಿಗೀಡಾದ ʼಪೋಸ್ಟ್‌ ಕಾರ್ಡ್‌ʼ

Update: 2021-05-08 15:03 GMT

ಬೆಂಗಳೂರು: ಸದಾ ನಕಲಿ ಸುದ್ದಿಗಳು ಹಾಗೂ ಜನರನ್ನು ವೃಥಾ ಪ್ರಚೋದಿಸುವ ಸುದ್ದಿಗಳನ್ನು ಪ್ರಕಟಿಸಿ ಕುಖ್ಯಾತಿ ಪಡೆದಿರುವ ಮಹೇಶ್‌ ವಿಕ್ರಮ್‌ ಹೆಗ್ಡೆ ಮಾಲಕತ್ವದ ಪೋಸ್ಟ್‌ ಕಾರ್ಡ್‌ ಸುದ್ದಿತಾಣವು ಇದೀಗ ಮತ್ತೊಂದು ನಕಲಿ ಸುದ್ದಿಯನ್ನು ಪ್ರಕಟಿಸಿ ನಗೆಪಾಟಲಿಗೀಡಾಗಿದೆ.

"ಮಧ್ಯಪ್ರದೇಶದ ಇಂಧೋರ್‌ ನ ರಾಧಾಸ್ವಾಮಿ ಸತ್ಸಂಗ್‌ ಕ್ಯಾಂಪಸ್‌ ಅನ್ನು ದೆಹಲಿಯ ಬೃಹತ್‌ ಕೋವಿಡ್‌ ಸೆಂಟರ್‌ ಆಗಿ ಪರಿವರ್ತಿಸಲಾಗಿದೆ. 10,000 ಬೆಡ್‌ ಗಳನ್ನು ಹೊಂದಿರುವ ಈ ಬೃಹತ್‌ ಸೆಂಟರ್‌ ಅನ್ನು ಆರೆಸ್ಸೆಸ್‌ ಸ್ವಯಂ ಸೇವಕರು ನಿರ್ವಹಿಸುತ್ತಿದ್ದಾರೆ. ಹಿಂದೂ ಧಾರ್ಮಿಕ ಕೇಂದ್ರಗಳು ಸತ್ಸಂಗವನ್ನೂ ಮಾಡುತ್ತದೆ, ಸೇವೆಗೂ ಸಜ್ಜಾಗುತ್ತದೆ. ಹಿಂದೂ ಕಾರ್ಯಕರ್ತರು ಧರ್ಮ ರಕ್ಷಣೆಗೂ ನಿಲ್ಲುತ್ತಾರೆ, ಸೇವೆಗೂ ಸನ್ನದ್ಧರಾಗುತ್ತಾರೆ" ಎಂದು ಚಿತ್ರವೊಂದನ್ನು ಪ್ರಕಟಿಸಿತ್ತು.

ರಾಧಾ ಸೋಮಿ ಸತ್ಸಂಗ್‌ ಬಿಯಾಸ್‌ 1891ರಲ್ಲಿ ಸ್ಥಾಪನೆಗೊಂಡಿದ್ದು, ಇದು ಧ್ಯಾನ ಕ್ರಮಗಳ ಕುರಿತು ಕಲಿಸುವ ಸಂಸ್ಥೆಯಾಗಿದೆ. ಸದ್ಯ ಬಾಬಾ ಗುರಿಂದರ್‌ ಸಿಂಗ್‌ ಇಲ್ಲಿನ ನೇತೃತ್ವವನ್ನು ವಹಿಸಿದ್ದಾರೆ. ಈ ಕ್ಯಾಂಪಸ್‌ ಛತಾಪುರ್‌ ನಲ್ಲಿ 300 ಎಕರೆಗೂ ವಿಸ್ತಾರವಾದ ಪ್ರದೇಶದಲ್ಲಿದೆ. 70 ಎಕರೆಯಷ್ಟು ಪ್ರದೇಶವನ್ನು ಕ್ವಾರಂಟೈನ್‌ ವ್ಯವಸ್ಥೆಗೆಂದು ಸಿದ್ಧಪಡಿಸಲಾಗಿದೆ ಎಂದು ಕಳೆದ ವರ್ಷ theprint.in ವರದಿ ಮಾಡಿತ್ತು.

ಇನ್ನು ರಾಧಾಸೋಮಿ ಸತ್ಸಂಗ್‌ ಬಿಯಾಸ್‌ ಅನ್ನು ಸಣ್ಣ ರೂಪದಲ್ಲಿ RSSB (Radha Soami Satsang Beas) ಎಂದು ಕರೆಯಲಾಗುತ್ತಿದ್ದು, ಇದರಲ್ಲಿನ ʼಬಿʼಯನ್ನು ತೆರವುಗೊಳಿಸಿದ ಪೋಸ್ಟ್‌ ಕಾರ್ಡ್‌ ಈ ಅತಿದೊಡ್ಡ ಕಾರ್ಯವನ್ನು ಆರೆಸ್ಸೆಸ್‌ ಗೆ ವರ್ಗಾಯಿಸಿದ್ದು ಸದ್ಯ ಆಕ್ರೋಶ ಮತ್ತು ವ್ಯಂಗ್ಯ ಮಿಶ್ರಿತ ಪ್ರತಿಕ್ರಿಯೆಗೆ ಗುರಿಯಾಗಿದೆ.

Posted by Postcard ಕನ್ನಡ on Saturday, 8 May 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News