ಖಾಸಗಿ ಆಸ್ಪತ್ರೆಗಳ ಒತ್ತಡಕ್ಕೆ ಮಣಿದ ಸರಕಾರ: ಒಂದೇ ದಿನದಲ್ಲಿ ಸಿಟಿ ಸ್ಕ್ಯಾನ್ ದರ ಪರಿಷ್ಕರಣೆ

Update: 2021-05-08 15:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 8: ಕೊರೋನ ಸೋಂಕು ದೃಢಪಡಿಸಲು ಸಿಟಿ ಸ್ಕ್ಯಾನ್ ಹಾಗೂ ಡಿಜಿಟಲ್ ಎಕ್ಸ್ ರೇ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ/ಲ್ಯಾಬ್‍ಗಳಲ್ಲಿ ಸಿಟಿ ಸ್ಕ್ಯಾನ್‍ಗೆ ಗರಿಷ್ಟ 1,500 ರೂ.ಹಾಗೂ ಡಿಜಿಟಲ್ ಎಕ್ಸ್-ರೇಗೆ ಗರಿಷ್ಠ 250 ರೂ.ದರ ನಿಗದಿಪಡಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರಕಾರ ಇದೀಗ ಒಂದೇ ದಿನದಲ್ಲಿ ಖಾಸಗಿ ಆಸ್ಪತ್ರೆಗಳ ಒತ್ತಡಕ್ಕೆ ಮಣಿದು ದರ ಬದಲಾವಣೆ ಮಾಡಿದೆ.

ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತಾರ್ ಅವರು, ಸಿಟಿ ಸ್ಕ್ಯಾನ್‍ಗೆ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದ್ದು, ಖಾಸಗಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ 2,500 ರೂ.ವರೆಗೆ ಸ್ವೀಕರಿಸಬಹುದು. ಬಿಪಿಎಲ್ ಕಾರ್ಡುದಾರರಿಗೆ 1,500 ರೂ. ದರ ನಿಗದಿಪಡಿಸಲಾಗಿದೆ.

ಎಕ್ಸ್-ರೇಗೆ ಗರಿಷ್ಠ 250 ರೂ. ಹಳೆಯ ದಿರವೇ ಮುಂದುವರಿಯಲಿದೆ. ಸಿಟಿ ಸ್ಕ್ಯಾನ್‍ಗೆ ಸಾಮಾನ್ಯವಾಗಿ 2 ಸಾವಿರ ರೂ.ನಿಂದ 3ಸಾವಿರ ರೂ., 6ರಿಂದ 8ಸಾವಿರ ರೂ.ಗಳ ವರೆಗೆ ಖಾಸಗಿ ಆಸ್ಪತ್ರೆಗಳು/ಲ್ಯಾಬ್‍ಗಳ ವಸೂಲಿ ಮಾಡುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸರಕಾರ ದರ ನಿಗದಿಪಡಿಸಿತ್ತು.

"ಇತ್ತೀಚೆಗೆ ಅನೇಕ ಪ್ರಕರಣಗಳಲ್ಲಿ ಕೊರೋನ ಸೋಂಕು ದೃಢಪಡಿಸಲು ಸಿಟಿ ಸ್ಕ್ಯಾನ್ ಹಾಗೂ ಡಿಜಿಟಲ್ ಎಕ್ಸ್-ರೇ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ/ಲ್ಯಾಬ್‍ಗಳಲ್ಲಿ ಸಿಟಿ ಸ್ಕ್ಯಾನ್‍ಗೆ ಗರಿಷ್ಠ 1,500 ರೂ.ಹಾಗೂ ಎಕ್ಸ್-ರೇಗೆ ಗರಿಷ್ಠ 250 ರೂ.ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ನಿನ್ನೆಯಷ್ಟೇ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News