ಕೋವಿಡ್ ಲಸಿಕೆಗೆ ಮೀಸಲು ಇಟ್ಟಿದ್ದ ಹಣ ಏನಾಯ್ತು: ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನೆ

Update: 2021-05-09 06:01 GMT

ಹಾಸನ, ಮೇ 8: ಕೊರೋನ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವಾಗ ಜನತಾ ಕರ್ಫ್ಯೂನಿಂದ ಯಾವ ಪ್ರಯೋಜನವಾಗುವುದಿಲ್ಲ. ಸಂಪೂರ್ಣ ಲಾಕ್‌ಡೌನ್ ಮಾಡಿದರೆ ಉತ್ತಮ. ಹಾಸನ ಜಿಲ್ಲೆಯ ಜನರನ್ನು ಉಳಿಸಲು ಯಾವ ಹೋರಾಟಕ್ಕಾದರೂ ನಾನು ಸಿದ್ಧನಿದ್ದೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.

ಶನಿವಾರ ನಗರದ ಲೋಕಸಭಾ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜನಾತಾ ಕರ್ಫ್ಯೂ ಏನೂ ಪ್ರಯೋಜನ ಆಗುವುದಿಲ್ಲ. ಇದು ತಪ್ಪು ನಿರ್ಧಾರವಾಗಿದ್ದು, ಸಂಪೂರ್ಣ ಲಾಕ್‌ಡೌನ್ ಮಾಡಬೇಕು. ಇಲ್ಲವಾದರೆ ಕೊರೋನ ಎರಡನೇ ಅಲೆ ನಿಯಂತ್ರಣಕ್ಕೆ ಬರುವುದಿಲ್ಲ. ರಾಜ್ಯದಲ್ಲಿ ದಿನಕ್ಕೆ 60 ಸಾವಿರ ಪಾಸಿಟಿವ್ ಬರುತ್ತಿದ್ದು, ಪೂರ್ಣ ಲಾಕ್‌ಡೌನ್ ಮಾಡುವ ಮೂಲಕ ಮಹಾರಾಷ್ಟ್ರ ನಮಗೆ ಮಾದರಿಯಾಗಬೇಕು. ಕರ್ನಾಟಕಕ್ಕೆ ಆಕ್ಸಿಜನ್ ನೀಡುವಂತೆ ಹೇಳಿರುವ ಸುಪ್ರೀಂಕೋರ್ಟ್‌ಗೆ ಕರ್ನಾಟಕದ ಪರವಾಗಿ ಧನ್ಯವಾದಗಳನ್ನು ಹೇಳುತ್ತೇನೆ ಎಂದರು. ಬಿಜೆಪಿ ಸಂಸದರಿಗೆ ಮತ ಹಾಕಿದ್ದು ವ್ಯರ್ಥವಾಗಿದೆ ಎಂಬುದು ಜನರ ಮನಸ್ಸಿನಲ್ಲಿ ಬಂದಿದೆ.

ರಾಜ್ಯದ ಈಗಿನ ಸ್ಥಿತಿಗೆ ರಾಜ್ಯ ಸರಕಾರವೇ ನೇರ ಕಾರಣ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಲಸಿಕೆಗೆ ಮೀಸಲು ಇಟ್ಟಿದ್ದ ಹಣ ಏನಾಯ್ತು ಎಂದು ಪ್ರಶ್ನೆ ಮಾಡಿದರು. ಈಗಾಗಲೇ ರಾಜ್ಯ ಸರಕಾರದ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ನನ್ನ ಜಿಲ್ಲೆಯ ಜನರನ್ನು ಉಳಿಸಲು ನಾನು ಯಾವುದೇ ಹೋರಾಟಕ್ಕೂ ಸಿದ್ಧ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಜಿಎಸ್‌ಟಿ ಹಣ ಇನ್ನು ಬಂದಿರುವುದಿಲ್ಲ. ನಾವೇನು ತಪ್ಪು ಮಾಡಿದ್ದೇವೆ? ಕರ್ನಾಟಕದಲ್ಲಿ 25 ಜನ ಬಿಜೆಪಿ ಸಂಸದರನ್ನು ಗೆಲ್ಲಿಸಿದ್ದರೂ, ರಾಜ್ಯಕ್ಕೆ ಸರಿಯಾದ ಪ್ರಮಾಣದಲ್ಲಿ ಆಕ್ಸಿಜನ್ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News