ಕೋವಿಡ್ ನಿರ್ವಹಣೆಯಲ್ಲಿ ಸಚಿವರ ಕಾರ್ಯವೈಖರಿಯ ಬಗ್ಗೆ ಬಿಜೆಪಿ ಶಾಸಕ ರಾಜುಗೌಡ ಅಸಮಾಧಾನ

Update: 2021-05-09 13:16 GMT
ಬಿಜೆಪಿ ಶಾಸಕ ರಾಜುಗೌಡ (Photo: thehindu.com)

ಯಾದಗಿರಿ, ಮೇ 9: 'ಕೋವಿಡ್ ನಿರ್ವಹಣೆ ಉಸ್ತುವಾರಿ ಹೊತ್ತಿರುವ ಸಚಿವರುಗಳೇ ದಯವಿಟ್ಟು, ನೀವು ನಮ್ಮ ಕರೆಗಳನ್ನು ಸ್ವೀಕರಿಸಿ, ನಿಮಗೆ ಸಹಾಯ ಮಾಡಲು ಆಗುತ್ತದೆಯೋ ಇಲ್ಲವೋ ಅಷ್ಟೇ ಹೇಳಿ' ಎಂದು ಮಾಜಿ ಸಚಿವ ಹಾಗೂ ಸುರಪೂರ ಕ್ಷೇತ್ರದ ಬಿಜೆಪಿ ಶಾಸಕ ರಾಜುಗೌಡ ಇಂದಿಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ನಿರ್ವಹಣೆ ವಿಚಾರದಲ್ಲಿ ರಾಜ್ಯದ ಸಚಿವರಿಂದ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಸಚಿವರು ಅವರ ಜಿಲ್ಲೆಯ ಸಮಸ್ಯೆ ಮಾತ್ರ ಬಗೆಹರಿಸಿದರೆ, ಶಾಸಕರು ಮತ್ತು ಉಳಿದ ಜಿಲ್ಲೆಯವರು ಏನು ಮಾಡಬೇಕು? ನಾವು ಅಧಿಕಾರದಲ್ಲಿದ್ದೇವೆ, ಈ ಸಮಯದಲ್ಲಿ ಜನರ ರಕ್ಷಣೆ ಮಾಡಬೇಕು ಎಂದು ಇದೇ ವೇಳೆ ಸಲಹೆ ಮಾಡಿದರು.

ರಾಜ್ಯ ಸರಕಾರ ಬಿಜೆಪಿ ಮಂತ್ರಿಗಳಿಗೆ, ಮತ್ತವರ ಕ್ಷೇತ್ರಗಳಿಗೆ ಮಾತ್ರ ಸೀಮಿತವಲ್ಲ. ಇಡೀ ರಾಜ್ಯಕ್ಕೆ ಸರಕಾರ. ಎಲ್ಲರೂ ನಾವು ನಂಬರ್ ಒನ್ ಆಗಬೇಕು, ಯಡಿಯೂರಪ್ಪ ಸಿಎಂ ಸ್ಥಾನದಿಂದ ಯಾವಾಗ ಕೆಳಗೆ ಇಳಿಯುತ್ತಾರೋ, ನಾವು ಯಾವಾಗ ಸಿಎಂ ಆಗುತ್ತೇವೋ ಎಂದು ಕನಸು ಕಾಣುತ್ತಿದ್ದಾರೆ. ಸಚಿವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಸುಮ್ಮನಾಗುತ್ತಿದ್ದಾರೆ, ಎಲ್ಲ ಕಡೆ ಓಡಾಡಿ ಕೆಲಸ ಮಾಡುತ್ತಿಲ್ಲ ಎಂದು ರಾಜುಗೌಡ ಇದೇ ವೇಳೆ ತಮ್ಮದೆ ಸರಕಾರದ ವಿರುದ್ಧ ಕಿಡಿಕಾರಿದರು.

ಜನರ ಮನವಿಗೆ ಸ್ಪಂದಿಸದೆ, ಕಾಟಾಚಾರಕ್ಕೆ ಸಚಿವರಾಗಿರುವವರನ್ನು ಸಿಎಂ ಕಿತ್ತು ಬಿಸಾಕಬೇಕು. ಇಂತಹ ಸಚಿವರಿಂದ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಬೇರೆ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ರೆಮ್‍ಡೆಸಿವಿರ್ ಸಿಗುತ್ತಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿಯೇ ರೆಮ್‍ಡೆಸಿವಿರ್ ಸಿಗುತ್ತಿಲ್ಲ. ಇದು ನಮಗೆ ಬಹಳಷ್ಟು ನೋವು ತಂದಿದೆ. ಯಾರು ಒತ್ತಡ ಹಾಕುತ್ತಾರೋ ಅವರಿಗೆ ಮಾತ್ರ ಜೀವರಕ್ಷಕ ರೆಮ್‍ಡೆಸಿವಿರ್ ಮತ್ತು ಆಕ್ಸಿಜನ್ ಸಿಗುತ್ತಿದೆ ಎಂದು ಅವರು ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News