ಶಿವಮೊಗ್ಗ ಜಿಲ್ಲಾದ್ಯಂತ ಕಟ್ಟುನಿಟ್ಟಿನಿಂದ ಲಾಕ್‌ಡೌನ್‌ ಜಾರಿ: ಸಚಿವ ಈಶ್ವರಪ್ಪ

Update: 2021-05-09 14:44 GMT

ಶಿವಮೊಗ್ಗ: ರಾಜ್ಯ ಸರಕಾರದ ನೀಡಿರುವ ಸೂಚನೆಯಂತೆ ಜಿಲ್ಲೆ ಸಂಪೂರ್ಣವಾಗಿ ಲಾಕ್‌ ಆಗಲಿದೆ. ಅದಕ್ಕಾಗಿ ಜಿಲ್ಲಾಡಳಿತ, ಪೊಲೀಸ್‌, ಕಂದಾಯ, ಮಹಾನಗರ ಪಾಲಿಕೆ ಸಿದ್ಧವಾಗಿದೆ. ಇಡೀ ಜಿಲ್ಲೆ ಖಾಕಿ ಸರ್ಪಗಾವಲಿನಲ್ಲಿ ಇರಲಿದ್ದು, ಅನಗತ್ಯವಾಗಿ ಓಡಾಡುವುದಕ್ಕೆ ಅವಕಾಶವೇ ಇಲ್ಲ. ಅಗತ್ಯ ವಸ್ತುಗಳನ್ನು ಖರೀದಿಸಬೇಕಾದರೆ ಕಾಲ್ನಡಿಗೆಯಲ್ಲೇ ಬರಬೇಕು. ಒಂದು ವೇಳೆ, ವಾಹನ ಹೊರ ತಂದರೆ ಅದನ್ನು ಸೀಝ್ ಮಾಡಲಾಗುವುದು. ಈ ಎಲ್ಲ ಅಂಶಗಳನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ನಡೆದ ಹಿರಿಯ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯ ನಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾದ್ಯಂತ ಕಟ್ಟುನಿಟ್ಟಿನಿಂದ ಲಾಕ್‌ಡೌನ್‌ ಜಾರಿ ಆಗಲಿದೆ. ಆಸ್ಪತ್ರೆಗೆ ತೆರಳುವಂತಹ ಅಗತ್ಯ ಸಂದರ್ಭದಲ್ಲಿ ಮಾತ್ರ ವಾಹನ ಬಳಸಬಹುದಾಗಿದೆ. ಮೆಡಿಕಲ್‌ಗಳಿಗೆ ಸ್ಥಳೀಯವಾಗಿ ನಡೆದುಕೊಂಡೇ ಹೋಗಬೇಕು. ಇತರ ಕಾರಣಗಳಿಗೆ ರಸ್ತೆಗೆ ಬರುವ ವಾಹನವನ್ನು ವಶಕ್ಕೆ ಪಡೆಯಲಾಗುವುದು. ಅದನ್ನು 14 ದಿನ ವಾಪಸ್‌ ನೀಡಲಾಗುವುದಿಲ್ಲ ಎಂದು ತಿಳಿಸಿದರು.

ಸ್ಥಳೀಯವಾಗಿ ಗುರುತಿಸಲಾಗಿರುವ ಝೋನ್‌ ವ್ಯಾಪ್ತಿಯಲ್ಲಿ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಪ್ರತಿ ಝೋನ್‌ನಲ್ಲಿ ಚೆಕ್‌ಪೋಸ್ಟ್‌ ಸ್ಥಾಪಿಸಿ ಸಂಚಾರ ನಿರ್ಬಂಧಿಸಲಾಗುವುದು. ಲಾಕ್‌ಡೌನ್‌ ಬಿಗಿಯಾಗಿ ಜಾರಿಗೊಳಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಕಾರ್ಮಿಕರನ್ನು ಸಣ್ಣ ಗುಂಪುಗಳಲ್ಲಿ ವಿಂಗಡಿಸಿ ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ಕಾಮಗಾರಿ ಅನುಷ್ಠಾನಗೊಳಿಸಬೇಕು ಎಂದು ಸೂಚನೆ ನೀಡಿದರು.

ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಅರಗ ಜ್ಞಾನೇಂದ್ರ, ಕುಮಾರ ಬಂಗಾರಪ್ಪ, ಆಯನೂರು ಮಂಜುನಾಥ್‌, ಎಸ್‌.ರುದ್ರೇಗೌಡ, ಪ್ರಸನ್ನ ಕುಮಾರ್‌, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌, ಜಿಪಂ ಸಿಇಒ ಎಂ.ಎಲ್‌.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಮತ್ತಿತರ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಪಾರ್ಕ್‌, ಸ್ಟೇಡಿಯಂ ಕ್ಲೋಸ್‌

ಮೆಗ್ಗಾನ್‌ ಆಸ್ಪತ್ರೆಯ ಒಳಗೆ ಕೋವಿಡ್‌ ರೋಗಿಗಳ ಬಳಿಗೆ ಅವರ ಸಂಬಂಧಿಕರು ತೆರಳಲು ಅವಕಾಶ ನೀಡಬಾರದು. ಬೆಳಗ್ಗೆ ವಾಕಿಂಗ್‌ ಹೋಗಲು ಅನುಮತಿ ಇರುವುದಿಲ್ಲ. ಎಲ್ಲ ಉದ್ಯಾನ, ಸ್ಟೇಡಿಯಂ ಕಟ್ಟುನಿಟ್ಟಿನಿಂದ ಮುಚ್ಚಬೇಕು. ಮದುವೆಗೆ ಒಟ್ಟು 40 ಮಂದಿಗೆ ಮಾತ್ರ ಅವಕಾಶವಿದ್ದು, ಅಗತ್ಯ ಪಾಸುಗಳನ್ನು ತಹಸೀಲ್ದಾರ್‌ ಕಚೇರಿಯಿಂದ ಪಡೆಯಬೇಕು. ಗಡಿಭಾಗದಲ್ಲಿರುವ ಜಮೀನುಗಳಿಗೆ ಕೃಷಿ ಚಟುವಟಿಕೆಗಳಿಗೆ ತೆರಳಲು ಅನುಮತಿ ನೀಡುವ ಕುರಿತು ಪರಿಶೀಲನೆ ನಡೆಸಬೇಕು ಎಂದು ಈಶ್ವರಪ್ಪ ಹೇಳಿದರು.

ಹಾಪ್‌ಕಾಮ್ಸ್‌ಗೆ 70 ವಾಹನಗಳ ವ್ಯವಸ್ಥೆ

ನಗರದ ಎಲ್ಲ ವಾರ್ಡ್‌ಗಳಲ್ಲಿ ತರಕಾರಿ ಹಣ್ಣುಗಳನ್ನು ಮಾರಾಟ ಮಾಡಲು ಹಾಪ್‌ಕಾಮ್ಸ್‌ಗೆ 70 ವಾಹನಗಳನ್ನು ಒದಗಿಸಲಾಗಿದೆ. ಈ ವಾಹನ ಎಲ್ಲ ವಾರ್ಡ್‌ಗಳಲ್ಲಿ ಬೆಳಗ್ಗೆ 6ರಿಂದ 12ರ ವರೆಗೆ ವಾಹನ ಸಂಚರಿಸಿ ಮಾರಾಟ ಮಾಡಲಿದೆ. ಎಪಿಎಂಸಿಯಲ್ಲಿ ಸಗಟು ಮಾರಾಟಕ್ಕೆ ಮಾತ್ರ ಅವಕಾಶವಿದೆ. ಎಪಿಎಂಸಿ ಹೊರಗೆ ಪ್ರಸ್ತುತ ನಡೆಯುತ್ತಿರುವ ಚಿಲ್ಲರೆ ಮಾರಾಟವನ್ನು ನಿಷೇಧಿಸಲಾಗಿದೆ. ತಳ್ಳುಗಾಡಿ ಮಾರಾಟಕ್ಕೆ ಸಹ ಬೆಳಗ್ಗೆ 6ರಿಂದ 12ರವರೆಗೆ ಅವಕಾಶ ನೀಡಲಾಗುವುದು. ಗ್ರಾಮೀಣ ಭಾಗದಲ್ಲಿವಾರದಲ್ಲಿಎರಡು ದಿನ ವಾಹನಗಳ ಮೂಲಕ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ. ಒಂದು ವೇಳೆ, ವಾಹನ ರಸ್ತೆಗಿಳಿದರೆ ಅದನ್ನು ಸೀಝ್ ಮಾಡಲಾಗುವುದು. ಜತೆಗೆ, ಭದ್ರತೆಗಾಗಿ ನಗರದಲ್ಲಿ 31 ಮತ್ತು ಜಿಲ್ಲೆಯಲ್ಲಿ 76 ಚೆಕ್‌ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಗಡಿಯಲ್ಲಿ ಪ್ರತಿಯೊಂದು ವಾಹನ ಪರಿಶೀಲಿಸಲಾಗುವುದು. ಕಾನೂನು ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು.

- ಲಕ್ಷ್ಮೇಪ್ರಸಾದ್‌, ಎಸ್‌.ಪಿ.

ಎಪಿಎಂಸಿಯಲ್ಲಿ ಚಿಲ್ಲರೆ ಮಾರಾಟಕ್ಕೆ ಅವಕಾಶ ನೀಡಲಾಗುವುದಿಲ್ಲ. ಬದಲಿಗೆ ನೂರಡಿ ರಸ್ತೆಯಲ್ಲಿರುವ ಶಿವಾಲಯ ಬಳಿ, ಕಾಶಿಪುರದ ಕೇಂಬ್ರಿಡ್ಜ್‌ ಶಾಲೆ ಹತ್ತಿರ, ನವುಲೆ ಕ್ರೀಡಾಂಗಣ ಎದುರಿನ ಪ್ರದೇಶ, ಸೈನ್ಸ್‌ ಮೈದಾನ, ಖಾಸಗಿ ಬಸ್‌ ನಿಲ್ದಾಣ, ತುಂಗಾನಗರ ಪಿಎಚ್‌ಸಿ ಎದುರು ತರಕಾರಿ ಮಾರಾಟ ಮಾಡಲಾಗುವುದು. ಸಾರ್ವಜನಿಕರು ದೈಹಿಕ ಅಂತರ ಕಾಪಾಡಿಕೊಂಡು ತರಕಾರಿ ಖರೀದಿಸಬೇಕು.
- ಚಿದಾನಂದ್‌ ವಟಾರೆ, ಮಹಾನಗರ ಪಾಲಿಕೆ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News