ಮಂಡ್ಯ ಜಿಲ್ಲೆಯಲ್ಲಿ 2 ಕೆಎಲ್ ಆಕ್ಸಿಜನ್ ಕೊರತೆ ಇದೆ: ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ

Update: 2021-05-09 14:32 GMT

ಮಂಡ್ಯ, ಮೇ9: ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇದ್ದು, ಪೂರೈಕೆಗೆ ಕ್ರಮವಹಿಸಲಾಗಿದೆ. ಇದಕ್ಕೆ ಹಣಕಾಸಿನ ಕೊರತೆಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ 22 ಕೆಎಲ್ ಆಕ್ಸಿಜನ್ ಅಗತ್ಯವಿದೆ. ಪ್ರಸ್ತುತ 20 ಕೆಎಲ್ ಲಭ್ಯವಿದೆ. ಉಳಿದ ಕೊರತೆ ತುಂಬಲು ಕ್ರಮವಹಿಸಲಾಗಿದೆ ಎಂದರು.

ಮಿಮ್ಸ್ ಗೆ 7, ಚುಂಚನಗಿರಿ ಆಸ್ಪತ್ರೆಗೆ 7, ಸ್ಯಾಂಜೋ ಆಸ್ಪತ್ರೆಗೆ 2, ಮಾದೇಗೌಡ  ಆಸ್ಪತ್ರೆಗೆ 2, ತಾಲೂಕಿನ ಆಸ್ಪತ್ರೆಗಳಿಗೆ 4 ಕೆಎಲ್ ಆಕ್ಸಿಜನ್, ಒಟ್ಟು 22 ಕೆಎಲ್ ಸಿಲಿಂಡರ್ ಅಗತ್ಯವಿದೆ ಎಂದು ಅವರು ಮಾಹಿತಿ ನೀಡಿದರು.

ಕೇಂದ್ರ ಸರಕಾರಕ್ಕೂ ಆಕ್ಸಿಜನ್ ಪೂರೈಕೆಗೆ ಮನವಿ ಮಾಡಲಾಗಿದೆ. ಹಲವಾರು ಏಜೆನ್ಸಿಗಳಿಗೆ ಬೇಡಿಕೆ ಇಟ್ಟಿದ್ದೇವೆ. ಆದರೆ, ತಕ್ಷಣಕ್ಕೆ ಪೂರೈಕೆ ಮಾಡಲು ಏಜೆನ್ಸಿಗಳಿಗೆ ಆಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜಿಲ್ಲೆಯ ಏಳು ತಾಲೂಕುಗಳಲ್ಲೂ ಆಕ್ಸಿಜನ್ ಪ್ಲಾಂಟೇಷನ್ ಸ್ಥಾಪನೆಗೆ ಮುಖ್ಯಮಂತ್ರಿಗಳ ಜತೆ ಮಾತನಾಡಲಾಗಿದೆ. ಮಂಡ್ಯ ಮಿಮ್ಸ್, ಮಳವಳ್ಳಿ ಆಸ್ಪತ್ರೆಗೆ ಟೆಂಡರ್ ಕರೆಯಲಾಗಿದೆ. ಉಳಿದ 5 ತಾಲೂಕುಗಳಿಗೆ ಟೆಂಡರ್ ತಯಾರಿ ನಡೆದಿದೆ ಎಂದು ಅವರು ಹೇಳಿದರು.

ಆಕ್ಸಿಜನ್ ಕೊರತೆ ಇದೆ ಎಂಬುದನ್ನು ಒಪ್ಪಿಕೊಂಡ ಸಚಿವರು, ಆದರೆ, ಸದ್ಯಕ್ಕೆ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಕ್ಸಿಜನ್ ಮತ್ತು ವೆಂಟಿಲೇಟರ್ ಸಮಸ್ಯೆ ಇಲ್ಲ. ಕೆಲವೇ ದಿನಗಳಲ್ಲಿ ಸಮಸ್ಯೆ ಪೂರ್ಣ ಬಗೆಹರಿಯಲಿದೆ ಎಂದರು.

ಕೊರೋನ ಎರಡನೇ ಅಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಇರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಆದ್ದರಿಂದ ಮೊದಲೇ ಅಗತ್ಯವಿರುವಷ್ಟು ಆಕ್ಸಿಜನ್ ಇಟ್ಟುಕೊಳ್ಳಲು ಆಗಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲೆಯ ಕೋವಿಡ್ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಕೊರೋನ ಸೋಂಕಿತರಿಗೆ ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗುತ್ತಿಲ್ಲ. ಹಾಗೆಯೇ ಕೊರೋನವಲ್ಲದ ರೋಗಿಗಳಿಗೂ ಚಿಕಿತ್ಸೆಗೆ ತೊಂದರೆಯಾಗದಂತೆ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.

ಚಿಕಿತ್ಸೆ ನೀಡುವಲ್ಲಿ, ಲಸಿಕೆ ಹಾಕುವಲ್ಲಿ ಯಾವುದೇ ಲೋಪ ಕಂಡುಬಂದರೆ ಅಂತರ ವೈದ್ಯರು ಮತ್ತು ಅಧಿಕಾರಿಗಳ ವಿರುದ್ಧ ನಿರ್ಧಾಕ್ಷೀಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ಈಗಾಗಲೇ ಹಲವರಿಗೆ ನೊಟೀಸ್ ಜಾರಿ ಮಾಡಲಾಗಿದೆ ಎಂದು ಅವರು ಎಚ್ಚರಿಸಿದರು.

ಜಿಲ್ಲೆಯಲ್ಲಿ ಈವರೆಗೆ 40,470 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಇವರಲ್ಲಿ 32,109 ಮಂದಿ ಗುಣಮುಖರಾಗಿದ್ದಾರೆ. 8,023 ಸಕ್ರಿಯ ಪ್ರಕರಣಗಳಿವೆ. ಮೊದಲ ಮತ್ತು ಎರಡನೇ ಅಲೆ ಒಟ್ಟಿಗೆ ಸೇರಿ ಇದುವರೆಗೆ 265 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಜಿಲ್ಲೆಯ ಕೋವಿಡ್ ಸೋಂಕಿತರ ಚಿಕಿತ್ಸೆಗೆ 100 ಆಕ್ಸಿಜನ್ ಸಿಲಿಂಡರ್ ಹಾಗೂ ವೈದ್ಯರು, ಆರೋಗ್ಯ ಕಾರ್ಯಕರ್ತರಿಗೆ 10 ಸಾವಿರ ಎನ್ 95 ಮಾಸ್ಕ್ ನೀಡಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ನಾರಾಯಣಗೌಡ ಅಭಿನಂದನೆ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News