ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಲ್ಲಿ ಅಡಗಿಕೊಂಡಿದ್ದಾರೆ: ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನೆ

Update: 2021-05-09 15:18 GMT

ಬೆಳಗಾವಿ, ಮೇ 9: ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ, ಕೋವಿಡ್ ಲಸಿಕೆ, ರೆಮ್‍ಡಿಸಿವಿರ್ ಸೇರಿದಂತೆ ಕೇಂದ್ರ ಸರಕಾರ ಎಲ್ಲ ವಿಷಯಗಳಲ್ಲೂ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಸಂಸದರಿಗೆ ಗಟ್ಟಿಯಾಗಿ ಪ್ರಶ್ನಿಸುವ ಧೈರ್ಯವಿಲ್ಲವೇ? ಸಂಸದರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಎಲ್ಲಿ ಅಡಗಿಕೊಂಡಿದ್ದಾರೆ? ಎಂದು ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್  ಪ್ರಶ್ನಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಪರ ದನಿ ಎತ್ತುವ ಮೂಲಕ ಜೀವಂತ ಇದ್ದೀನಿ ಎನ್ನುವುದನ್ನು ತೋರಿಸಲಿ. ಕೊರೋನ ನಿಯಂತ್ರಣ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ಸಂಪೂರ್ಣ ವಿಫಲವಾಗಿವೆ. ಇಡೀ ದೇಶದಲ್ಲಿ ಬೀದಿ ಬೀದಿಯಲ್ಲಿ ಹೆಣ ಸುಡುವಂತಾಗಿದೆ. ಎಲ್ಲಿ ಹೋಯಿತು ನಿಮ್ಮ ಅಚ್ಛೇ ದಿನ್ ಘೋಷಣೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಜನರಿಗೆ 2013ರಲ್ಲಿ ಇದ್ದಂತಹ ದಿನಗಳೇ ಇದ್ದರೆ ಸಾಕು ಎಂದು ಜನರು ಬೇಡಿಕೊಳ್ಳುತ್ತಿದ್ದಾರೆ. ಕೊರೋನ ಮೊದಲ ಅಲೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಘೋಷಿಸಿದ್ದ, 20 ಲಕ್ಷ ಕೋಟಿ ರೂ.ಪ್ಯಾಕೇಜ್‍ಗೆ ಜನ ಕಾಯುತ್ತಿದ್ದಾರೆ. ಅದಿನ್ನೂ ಬಂದಿಲ್ಲ. ಈ ಸಂದರ್ಭದಲ್ಲಿ ಎರಡನೆ ಅಲೆ ಬಂದಿದೆ. ಮೂರನೆ ಅಲೆಯೂ ಬರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಶವದಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ದೂರಿದರು.

ಕರ್ನಾಟಕ ರಾಜ್ಯದಲ್ಲೂ ಕೊರೋನ ಕರ್ಫ್ಯೂ ನಗೆಪಾಟಲಿಗೀಡಾಗಿದೆ. ಆಮ್ಲಜನಕ ಸಿಗದೆ ಜನರು ಸಾಯುತ್ತಿದ್ದಾರೆ. ಸರಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಸಚಿವರೆಲ್ಲರಿಗೂ ನಾಚಿಕೆಯಾಗಬೇಕು ಎಂದು ಲೇವಡಿ ಮಾಡಿದ ಅವರು, ಬೆಳಗಾವಿ ಜಿಲ್ಲೆಗೆ ಬಾಗಲಕೋಟೆಯ ಗೋವಿಂದ ಕಾರಜೋಳ ಅವರನ್ನು ಉಸ್ತುವಾರಿ ಮಂತ್ರಿ ಮಾಡಲಾಗಿದೆ. ಆದರೆ, ಅವರಿಗೆ ಜಿಲ್ಲೆಯ ಬಗ್ಗೆ ಮಾಹಿತಿಯೇ ಇಲ್ಲ. ಜಿಲ್ಲೆಯಲ್ಲಿ ನಾಲ್ವರು ಮಂತ್ರಿಗಳಿದ್ದರೂ ಸಮರ್ಥರಿಲ್ಲ ಎಂದು ಬೇರೆ ಜಿಲ್ಲೆಯವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದಂತಿದೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News