ಚಾಮರಾಜನಗರ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಜೀಪ್; ಓರ್ವ ಮೃತ್ಯು,10 ಮಂದಿಗೆ ಗಾಯ
ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಿಂದ ತುಳಸಿ ಕೆರೆ ಸಮೀಪದ ಇಂಡಿ ಬಸಪ್ಪನ ದೇವಸ್ಥಾನಕ್ಕೆ ತೆರಳುತ್ತಿದ್ದ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 10ಕ್ಕೂ ಹೆಚ್ಚು ಜನ ಗಾಯಗೊಂಡು, ಓರ್ವ ಮೃತಪಟ್ಟಿರುವ ಘಟನೆ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಿವಾಸಿ ವೀರಣ್ಣಗೌಡ(75) ಮೃತಪಟ್ಟವರು.
ಘಟನೆಯ ವಿವರ: ಮಲೆಮಹದೇಶ್ವರ ಬೆಟ್ಟದ ನಿವಾಸಿಗಳಾದ ಕೆಂಪೇಗೌಡ (50), ಮಾದತಂಬಡಿ (70), ಮಾದಯ್ಯ (52),ಜಡೇಮಾದತಂಬಡಿ (75), ಹುಚ್ಚಯ್ಯ (55), ನಾಗ (40), ಪುಟ್ಟಸ್ವಾಮಿ (37), ಮಾದಯ್ಯ(66), ಮಹೇಶ್ (23), ಶಾಂತಮ್ಮ(42), ಗಿರಿಜಮ್ಮ(33) ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿ ಜೀಪ್ ನಲ್ಲಿ ತುಳಸಿ ಕೆರೆ ಸಮೀಪದ ಇಂಡಿ ಬಸಪ್ಪನ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಪಾಲಾರ್ ರಸ್ತೆಯ ನಾಲ್ಕನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಬೆಟ್ಟದ ತಳಭಾಗಕ್ಕೆ ಬಿದ್ದಿದೆ. ಗಾಯಾಳುಗಳನ್ನು ತಮಿಳುನಾಡಿನ ಮೆಟ್ಟೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಸಂಬಂಧ ಮಲೈಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.