ಬಿಯು ಸಂಖ್ಯೆ ಇಲ್ಲದಿದ್ದರೂ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಬೇಕು: ಸಚಿವ ಆರ್.ಅಶೋಕ್

Update: 2021-05-09 17:41 GMT

ಬೆಂಗಳೂರು, ಮೇ 9: ಬಿಯು ಸಂಖ್ಯೆ ಇಲ್ಲವೆಂಬ ನೆಪವೊಡ್ಡಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರರೆ ಅಂತಹ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ(ಒಪಿಡಿ) ವಿಭಾಗವನ್ನ ಮುಚ್ಚಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಎಚ್ಚರಿಕೆ ನೀಡಿದ್ದಾರೆ.

ರವಿವಾರ ಇಲ್ಲಿನ ರಾಜರಾಜೇಶ್ವರಿ ನಗರದ ವಾರ್ ರೂಮ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಯಾವ ಖಾಸಗಿ ಆಸ್ಪತ್ರೆಗಳು ಬಿಯು ನಂಬರ್ ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತವೋ, ಅಂತಹ ಆಸ್ಪತ್ರೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಲಾಗುವುದು. ಈಗಾಗಲೇ ಎಲ್ಲ ಆಸ್ಪತ್ರೆಗಳಿಗೆ ದಾಖಲು ಮಾಡಿಕೊಳ್ಳಲು ಬಿಯು ನಂಬರ್ ಕಡ್ಡಾಯಗೊಳಿಸುವಂತಿಲ್ಲ ಎಂದು ಸೂಚಿಸಿದ್ದೇನೆ ಎಂದು ತಿಳಿಸಿದರು.

ರಾಜ್ಯಕ್ಕೆ 2 ಸಾವಿರ ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ತರಿಸಿಕೊಳ್ಳಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ 100 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರವನ್ನ ಸ್ಥಾಪಿಸಲಾಗುವುದು ಎಂದ ಅವರು, ನಾಳೆಯಿಂದ ಲಾಕ್‍ಡೌನ್ ನಿಯಮಗಳು ಜಾರಿಯಾಗಲಿವೆ. ಕೋವಿಡ್ ನಿಯಂತ್ರಿಸುವುದಕ್ಕೆ ಲಾಕ್‍ಡೌನ್ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ಸಾರ್ವಜನಿಕರು ಅನಗತ್ಯವಾಗಿ ರಸ್ತೆಗೆ ಇಳಿಯುವಂತಿಲ್ಲ.
ಹಾಗೇ ಲಾಕ್‍ಡೌನ್ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ನಿಯಮಗಳನ್ನ ಉಲ್ಲಂಘಿಸುವ ಸಂಸ್ಥೆಗಳ ಮೇಲೆಯೂ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು. ಇದಕ್ಕೂ ಮೊದಲು ಕಂದಾಯ ಸಚಿವ ಆರ್.ಅಶೋಕ್ ಮತ್ತು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ರಾಜರಾಜೇಶ್ವರಿ ನಗರದ ವಾರ್ ರೂಮ್‍ಗೆ ದಿಢೀರ್ ಭೇಟಿ ನೀಡಿದರು.

ಈ ವೇಳೆ ಆರ್.ಅಶೋಕ್ ಅವರು, ಬೆಡ್ ಹಂಚಿಕೆಯ ಹೊಣೆಯನ್ನ ವೈದ್ಯರಿಗೆ ನೀಡಬೇಕು. ಇದರಿಂದ ಅಗತ್ಯವಿರುವವರಿಗೆ ಬೆಡ್ ದೊರೆಯುತ್ತದೆ ಎಂದು ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News