ಸಂಸದ ತೇಜಸ್ವಿ ಸೂರ್ಯ ಉಲ್ಲೇಖಿಸಿದ್ದ 17 ಮಂದಿ ನೌಕರರು ಕೋವಿಡ್ ವಾರ್ ರೂಮ್ ಗೆ ಮರುನೇಮಕ
ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಹಾಗೂ ಇನ್ನಿತರ ಶಾಸಕರು ಬೆಂಗಳೂರಿನ ಕೋವಿಡ್ ವಾರ್ ರೂಮ್ ಗೆ ದಾಳಿ ನಡೆಸಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮುಸ್ಲಿಂ ನೌಕರರ ಹೆಸರನ್ನು ಓದಿ ಹೇಳಿದ್ದರು. ಈ ಕುರಿತಾದಂತೆ ಸಾಮಾಜಿಕ ಜಾಲತಾಣದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅಮಾನತು ಮಾಡಿದ್ದ 17 ಮಂದಿಯನ್ನು ಕರ್ತವ್ಯಕ್ಕೆ ಮರುನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತೇಜಸ್ವಿ ಸೂರ್ಯ ಆರೋಪಿಸಿದ್ದರು. ಈ ವೇಳೆ ವಾರ್ ರೂಂಗೆ ಭೇಟಿ ನೀಡಿ ಅಲ್ಲಿದ್ದ ನೌಕರರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ ಕೆಲ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಕೇವಲ ಮುಸ್ಲಿಂ ಸಮುದಾಯದ 17 ಮಂದಿಯ ಹೆಸರೆತ್ತಿ ನಿಂದಿಸಿದ ಕುರಿತು ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆ 17 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದರು.
ಈ 17 ಮಂದಿ ನೌಕರರನ್ನು ಕ್ರಿಸ್ಟಲ್ ಇನ್ಫೋಸಿಸ್ಟಂ ಆಂಡ್ ಸರ್ವಿಸಸ್ ಎಂಬ ಹೊರಗುತ್ತಿಗೆ ಸಂಸ್ಥೆಯು ಬಿಬಿಎಂಪಿ ವಾರ್ ರೂಮ್ ಗೆ ನೇಮಕ ಮಾಡಿತ್ತು. ಈ ಕಂಪೆನಿಯ ಅಧಿಕಾರಿಗಳು ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಅವರನ್ನು ಭೇಟಿ ಮಾಡಿ, ಈ ನೌಕರರು ನಿರಪರಾಧಿಗಳಾಗಿದ್ದು, ಅವರನ್ನು ಮರು ನೇಮಕ ಮಾಡಿಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದರು. ಈ ಕುರಿತು ಮಾತನಾಡಿದ ತುಳಸಿ ಮದ್ದಿನೇನಿ, "ಈ ವೃತ್ತಿಯು ಹಲವರ ಜೀವನದ ಪ್ರಶ್ನೆಯಾಗಿದ್ದು, ಇವರೆಲ್ಲರನ್ನೂ ಮತ್ತೆ ಮರುನೇಮಕ ಮಾಡಿಕೊಳ್ಳಲಾಗುವುದು. ಅವರು ಸೋಮವಾರದಿಂದ ಕೆಲಸಕ್ಕೆ ಹಾಜರಾಗಲಿದ್ದಾರೆ" ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.