''ಕಾರ್ಪೋರೆಟ್ ವಹಿವಾಟಿನ ಮೇಲೆ ಶೇ.2 ಕೊರೋನ ಸೆಸ್, ಉದ್ಯಮಿಗಳು, ರಾಜಕಾರಣಿಗಳ ಮೇಲೆ ಶೇ.5 ಸುಂಕ ವಿಧಿಸಿ''
ಬೆಂಗಳೂರು, ಮೇ 10: `ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ಮತ್ತು ಉಚಿತವಾಗಿ ಲಸಿಕೆ ನೀಡಲು ರಾಜ್ಯದಲ್ಲಿನ ಕಾರ್ಪೋರೇಟ್ ವಹಿವಾಟಿನ ಮೇಲೆ 'ಶೇ.2ರ ಕೊರೋನ ಸೆಸ್' ನಿಗದಿ ಮಾಡಬೇಕು. ಜೊತೆಗೆ ರಾಜ್ಯದಲ್ಲಿನ ಎಲ್ಲ ಕೋಟ್ಯಧಿಪತಿ ಉದ್ಯಮಪತಿಗಳು ಮತ್ತು ರಾಜಕಾರಣಿಗಳ ವಾರ್ಷಿಕ ಆದಾಯದ ಶೇ.5ರಷ್ಟು ಸುಂಕವಾಗಿ ಸಂಗ್ರಹಿಸಿ. ಕೂಡಲೇ ಈ ಹಣವನ್ನು ಸರಕಾರಕ್ಕೆ ಸಲ್ಲಿಸುವಂತೆ ಸುಗ್ರೀವಾಜ್ಞೆ ಹೊರಡಿಸಬೇಕು' ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮಿ, ನಾಡೋಜ ಬರಗೂರು ರಾಮಚಂದ್ರಪ್ಪ, ಸಸಿಕಾಂತ್ ಸೆಂಥಿಲ್, ಮಾವಳ್ಳಿ ಶಂಕರ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹಾಗೂ ನಟ ಚೇತನ್ ಸೇರಿದಂತೆ 400ಕ್ಕೂ ಹೆಚ್ಚು ಮಂದಿ ನೇತೃತ್ವದ `ಜನಾಗ್ರಹ ಆಂದೋಲನ' ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದೆ.
'ಮೆಟ್ರೋ, ರಸ್ತೆ ವಿಸ್ತರಣೆ, ಸರಕಾರಿ ಸೌಧಗಳ ನಿರ್ಮಾಣ, ಮಠಗಳಿಗೆ ಅನುದಾನ ಮುಂತಾದ ಬಹುತೇಕ ತುರ್ತಲ್ಲದ ಯೋಜನೆಗಳಿಗೆ ಮಂಜೂರು ಮಾಡಿರುವ ಹಣವನ್ನು ಕೋವಿಡ್ ನಿರ್ವಹಣೆಗೆ ವರ್ಗಾವಣೆ ಮಾಡಬೇಕು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಬರ ಪರಿಹಾರದ, ನೆರೆ ಪರಿಹಾರದ, ಜಿಎಸ್ಟಿ ಬಾಬ್ತಿನ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಬೇಕು. ಜೊತೆಗೆ `ಸೆಂಟ್ರಲ್ ವಿಸ್ಟಾ' (20 ಸಾವಿರ ಕೋಟಿ ರೂ.ಮೌಲ್ಯದ ಮೋದಿ ಮಹಲ್)ನಂತಹ ಐಶಾರಾಮಿ ದುಂದು ವೆಚ್ಚಗಳನ್ನು ರದ್ದುಗೊಳಿಸಿ ರಾಜ್ಯಗಳಿಗೆ ಕೋವಿಡ್ ನೆರವು ನೀಡಲು ಮುಂದಾಗಬೇಕೆಂದು ಪ್ರಧಾನಿ ಮೋದಿಯವರನ್ನು ಒತ್ತಾಯಿಸಬೇಕು' ಎಂದು ಸಲಹೆ ಮಾಡಲಾಗಿದೆ.
ಎಲ್ಲ ಊರುಗಳಲ್ಲಿ ಕೊರೋನ ಕೇರ್ ಸೆಂಟರ್ ಮತ್ತು ಆಕ್ಸಿಜನ್ ಸಹಿತ ಬೆಡ್‍ಗಳ ಸಂಖ್ಯೆಯನ್ನು ತೀವ್ರಗತಿಯಲ್ಲಿ ಪ್ರತಿನಿತ್ಯ ಹೆಚ್ಚಿಸಬೇಕು ಮತ್ತು ನಿತ್ಯವೂ ಇದರ ಮಾಹಿತಿ ಜನರಿಗೆ ನೀಡಬೇಕು. ಎಲ್ಲ ವಯಸ್ಸಿನ ಜನರಿಗೂ ಲಸಿಕೆಯನ್ನು ಸರಕಾರವೇ ಉಚಿತವಾಗಿ ನೀಡಬೇಕು. ಎಲ್ಲ ಕುಟುಂಬಗಳಿಗೂ ಪಡಿತರ ಕಿಟ್ ಅನ್ನು ವಿತರಿಸಬೇಕು. ಕೆಲಸ ಕಳೆದುಕೊಂಡಿರುವ ಅಸಂಘಟಿತ ವಲಯದ ಆಟೋ, ಟ್ಯಾಕ್ಸಿ ಚಾಲಕ, ನೇಕಾರ, ಕೃಷಿ ಕಾರ್ಮಿಕ, ಸಣ್ಣ ವ್ಯಾಪಾರಿ, ಸ್ವಯಂ ಉದ್ಯೋಗಿ ಮುಂತಾದ ಶ್ರಮಿಕ ವರ್ಗದ ಜನರಿಗೆ ದಿಲ್ಲಿ ಸರಕಾರದ ಮಾದರಿಯಲ್ಲಿ ಮಾಸಿಕ ಕನಿಷ್ಠ 5 ಸಾವಿರ ರೂ.ಗಳ ಆರ್ಥಿಕ ನೆರವು ನೀಡಬೇಕು. ಕಚೇರಿಗಳ ಸುತ್ತ ಅಲೆದಾಡಿಸದೆ ಕೂಡಲೇ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬೇಕು. ಕೊರೋನದಿಂದ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬಗಳಿಗೆ ಬದುಕನ್ನು ಕಟ್ಟಿಕೊಳ್ಳಲು ಕನಿಷ್ಠ 5 ಲಕ್ಷ ರೂ.ಪರಿಹಾರ ಧನವನ್ನು ನೀಡಬೇಕು' ಎಂದು ಮನವಿ ಮಾಡಲಾಗಿದೆ.
'ಕೇರಳ, ತಮಿಳುನಾಡು, ಆಂಧ್ರ, ದಿಲ್ಲಿ ಮುಂತಾದ ಸರಕಾರಗಳು ಈಗಾಗಲೇ ಈ ನಿಟ್ಟಿನಲ್ಲಿ ನಿರ್ಧಾರಗಳನ್ನು ತೆಗೆದುಕೊಂಡಾಗಿದೆ. ತಮ್ಮ ಸರಕಾರದಿಂದ ದೇಶಕ್ಕೆ ಮಾದರಿಯಾಗಬಲ್ಲ ಮತ್ತು ಜನರಿಗೆ ನಿರಾಳತೆಯನ್ನು ತರಬಲ್ಲ ಘೋಷಣೆಯ ಅಗತ್ಯವಿದೆ. ಸಿಎಂ ಆಗಿ ನೀವು ದಿಟ್ಟ ಕ್ರಮಗಳ ಮೂಲಕ ಜನರ ನೆರವಿಗೆ ಧಾವಿಸದಿದ್ದರೆ ಕೋವಿಡ್ ನಿಯಮಗಳನ್ನು ಪಾಲಿಸುತ್ತಲೇ ಪ್ರತಿಭಟಿಸುವ ಮತ್ತು `ನಿಮ್ಮ ಬಳಿಗೂ ಬರುವ' ಅನಿವಾರ್ಯ ನಿರ್ಧಾರಗಳನ್ನು ನಾವೂ ಮಾಡಲೇಬೇಕಾಗುತ್ತದೆ. ಏಕೆಂದರೆ ನಮ್ಮ ಜೀವಕ್ಕಿಂತಲೂ ಜನರ ಜೀವನ ಮುಖ್ಯವಿದೆ. ಅದರ ಪತನವನ್ನು ನೋಡುತ್ತಾ ಕೈಕಟ್ಟಿ ಕೂರಲು ನಮಗೆ ಸಾಧ್ಯವಿಲ್ಲ' ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.