ಶಿಕಾರಿಪುರ: ಕೊರೋನದಿಂದ ಮೃತಪಟ್ಟ ಹಿಂದೂ ಮಹಿಳೆಯ ಶವ ಸಂಸ್ಕಾರ ನೆರವೇರಿಸಿದ ಯುವಕರ ತಂಡ

Update: 2021-05-10 16:31 GMT

ಶಿವಮೊಗ್ಗ, ಮೇ.10: ಕೊರೋನದಿಂದ ಮೃತಪಟ್ಟ ಹಿಂದೂ ವೃದ್ಧೆಯೊಬ್ಬರ ಅಂತ್ಯಸಂಸ್ಕಾರ ಮಾಡಲು ಕುಟುಂಬದ ಸದಸ್ಯರೂ ಸೇರಿದಂತೆ ಯಾರೂ ಮುಂದೆ ಬರದಿದ್ದಾಗ ಮುಸ್ಲಿಂ ಯುವಕರ ತಂಡವೊಂದು ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಿದ ಘಟನೆ ಶಿಕಾರಿಪುರ ತಾಲೂಕಿನಲ್ಲಿ  ನಡೆದಿದೆ.

ತಾಲೂಕಿನ ಚುಂಚಿನಕೊಪ್ಪ ಗ್ರಾಮದ ರುದ್ರಿಬಾಯಿ (57) ಕೊರೋನ ಸೋಂಕಿನಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ರವಿವಾರ (ಮೇ 9) ಮೃತಪಟ್ಟಿದ್ದರು. ಮೃತ ಮಹಿಳೆಯ ಶವವನ್ನು ಆಂಬುಲೆನ್ಸ್‌ನಲ್ಲಿ ಗ್ರಾಮಕ್ಕೆ ಇಂದು ಸಾಗಿಸಲಾಯಿತಾದರೂ ಅಂತ್ಯ ಸಂಸ್ಕಾರ ಮಾಡಲು ಕುಟುಂಬದ ಸದಸ್ಯರೂ ಹಿಂದೆ ಸರಿದರು.

ಈ ಸಂದರ್ಭದಲ್ಲಿ ಇಲ್ಲಿನ ಸಮಾಜ ಸೇವಕ ಮಹಮ್ಮದ್‌ ಇರ್ಫಾನ್‌ ಮತ್ತು ಅವರ ಸ್ನೇಹಿತರ ತಂಡ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದೆ.

ಮಹಮ್ಮದ್‌ ಇರ್ಫಾನ್‌ರೊಂದಿಗೆ ಅವರ ಸ್ನೇಹಿತರಾದ ಅಸ್ಲಂ, ಇಮ್ರಾನ್‌, ನವೀದ್‌, ರಹಮತ್‌, ಮೌಲಾನ ಅಶ್ವಕ್‌‚ ಮೌಲಾನ ಇಬ್ರಾಹಿಂ ಸಾಥ್‌ ನೀಡಿ, ಹಿಂದೂ ಸಂಪ್ರದಾಯದಂತೆ ರುದ್ರಿಬಾಯಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಮ್ಮದ್‌ ಇರ್ಫಾನ್‌ ಅವರು ಪ್ರತಿಕ್ರಿಯೆ ನೀಡಿದ್ದು, ಖಾಯಿಲೆ ಯಾರಿಗೂ ಹೇಳಿ ಕೇಳಿ ಬರೋದಿಲ್ಲ. ಕೊರೋನ ಸೋಂಕು ಎಲ್ಲರನ್ನೂ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕೊರೋನವನ್ನು ಧರ್ಮದೊಂದಿಗೆ ಥಳಕು ಹಾಕವುದು ಸರಿಯಲ್ಲ. ದಯವಿಟ್ಟು ಯಾರೂ ಇಂತಹ ಸಂದರ್ಭದಲ್ಲಿ ಜಾತಿ-ಧರ್ಮದ ಲೇಪ ಹಚ್ಚಬೇಡಿ ಎಂದು ಮನವಿ ಮಾಡಿದರು.

ಮುಸ್ಲಿಂ ಹುಡುಗರು ಬಂದು ಇಂದು ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರ ಮಾಡಿದ್ದೀವಿ. ಸಮಾಜದಲ್ಲಿ ಎಲ್ಲರಿಗೂ ಸಂಕಷ್ಟ ಬರುತ್ತದೆ. ಅದಕ್ಕೆ ಸ್ಪಂದಿಸುವುದು ಮನುಷ್ಯತ್ವ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News