×
Ad

''ಕರ್ನಾಟಕಕ್ಕೆ ವ್ಯಾಕ್ಸಿನ್ ಇಲ್ಲ, ಆಕ್ಸಿಜನ್ ಕೊಡಲಿಲ್ಲ; 25 ಸಂಸದರು ಕತ್ತೆ ಮೇಯಿಸುತ್ತಿರಬಹುದೇ?"

Update: 2021-05-11 15:22 IST

ಬೆಂಗಳೂರು, ಮೇ 11: ದೇಶದಲ್ಲಿ ಕರ್ನಾಟಕ ಅತಿ ಹೆಚ್ಚು ಸಕ್ರಿಯ ಪ್ರಕರಣಗಳ ರಾಜ್ಯವಾಗಿದೆ. ಆದರೆ ಕೇಂದ್ರ ಸರ್ಕಾರದ ಅನ್ಯಾಯದ ಪಟ್ಟಿ ದೊಡ್ಡದಿದೆ. ಕರ್ನಾಟಕಕ್ಕೆ ವ್ಯಾಕ್ಸಿನ್ ಇಲ್ಲ, ಆಕ್ಸಿಜನ್ ಕೊಡಲಿಲ್ಲ, ಪಿಎಂ ಕೇರ್ಸ್ ಹಣ ಇಲ್ಲ, ರೆಮಿಡಿಸಿವಿರ್ ಹಂಚಿಕೆಯಲ್ಲಿ ತಾರತಮ್ಯ, ವೆಂಟಿಲೇಟರ್‌ಗಳನ್ನು ನೀಡಲಿಲ್ಲ ರಾಜ್ಯದ 25 ಸಂಸದರು ಕತ್ತೆ ಮೇಯಿಸುತ್ತಿರಬಹುದೇ? ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯ ಸಚಿವರ ನಾಲಿಗೆಯಲ್ಲೇ ಈ ಸರ್ಕಾರದ ಅಯೋಗ್ಯತನ ಬಟಾಬಯಲಾಗುತ್ತಿದೆ. ರೈತರ ಸಾಲಾ ಮನ್ನಾ ಮಾಡಲು, ಲಾಕ್‌ಡೌನ್‌ನಿಂದ ನರಳುತ್ತಿರುವ ಬಡವರಿಗೆ ನೆರವು ನೀಡಲು ನೋಟ್ ಪ್ರಿಂಟಿಂಗ್ ಮೆಷಿನ್ ಇಲ್ಲ ಎನ್ನುವ ಸಚಿವ ಈಶ್ವರಪ್ಪ ಅವರೇ, ನಿಮ್ಮಲ್ಲಿ ನೋಟ್ ಎಣಿಸುವ ಮಿಷನ್ ಇದ್ದಮೇಲೆ ಪ್ರಿಟಿಂಗ್ ಮೆಷಿನ್ ಕೂಡ ಇರಬಹುದು ಒಮ್ಮೆ ಮನೆಯಲ್ಲಿ ಹುಡುಕಿ! ಎಂದು ಕುಟುಕಿದೆ.

ಸದ್ಯಕ್ಕೆ ಜನತೆಯ ಭರವಸೆ ನ್ಯಾಯಾಂಗ ಒಂದೇ. ಇತ್ತೀಚಿಗೆ ಕೋರ್ಟುಗಳೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬುದ್ದಿ ಹೇಳುವಂತಾಗಿದ್ದು ಬಿಜೆಪಿಯ ದುರಾಡಳಿತಕ್ಕೆ ನಿದರ್ಶನ. ಜನರಿಂದ ಆಯ್ಕೆಯಾಗುವ ಸರ್ಕಾರಗಳು ಜನಹಿತ ಮರೆತಾಗ ಕೋರ್ಟ್‌ಗಳು ಜನರ ಧ್ವನಿಯಾಗಿ ಮಾತನಾಡುವ ಸ್ಥಿತಿ ಬಂದಿದ್ದು ಬಿಜೆಪಿಯ ದಪ್ಪ ಚರ್ಮದ ಸರ್ಕಾರದ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಕೋವಿಡ್ ನಿರ್ವಹಣೆಯಲ್ಲಿನ ವೈಫಲ್ಯ, ಬಿಜೆಪಿ ಸರ್ಕಾರದ ನಿರ್ಲಕ್ಷ್ಯ, ದುರಾಡಳಿತಕ್ಕೆ ಸಾಕ್ಷಿಯಾಗಿದೆ. 19,372 ಒಟ್ಟು ಸಾವು, 596 ಒಂದು ದಿನದಲ್ಲಿ ಸಾವು, 5,71,006 ಅತಿಹೆಚ್ಚು ಸಕ್ರಿಯ ಪ್ರಕರಣ, ಇದೆಲ್ಲದರ ಮಧ್ಯೆ, ಜನರು ರೋಗಿಗಳ ಪೊಲೀಸರ ದಬ್ಬಾಳಿಕೆ, 18-44 ವಯೋಮಾನದವರಿಗೆ ಲಸಿಕೆ ಕೊರತೆ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಇದು ರಾಜ್ಯ ಸರ್ಕಾರದ ಅಸಾಮರ್ಥ್ಯವೋ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯೋ ಸಚಿವ ಸುಧಾಕರ್ ಸ್ಪಷ್ಟಪಡಿಸಬೇಕು. ಕೇಂದ್ರ ನೀಡಿದ ಪಟ್ಟಿಯಲ್ಲಿ ಕರ್ನಾಟಕದ ಹೆಸರು ಏಕಿಲ್ಲ? ವ್ಯಾಕ್ಸಿನ್‌ಗಾಗಿ ಸರ್ಕಾರ ಬೇಡಿಕೆಯನ್ನೇ ಇಟ್ಟಿಲ್ಲವೇ? ಇಟ್ಟಿದ್ದರೆ ಕೇಂದ್ರ ವಂಚಿಸಿದೆಯೇ? ವ್ಯವಸ್ಥೆ ಸರಿಪಡಿಸುವ ಎಳೆ ಸಂಸದನೂ ಸೇರಿ 25 ಸಂಸದರು ಎಲ್ಲಿ ಅಡಗಿದ್ದಾರೆ?

- ಕಾಂಗ್ರೆಸ್ (ಟ್ವೀಟ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News