ಚಿಕ್ಕಮಗಳೂರು: ಅಕಾಲಿಕ ಮಳೆಗೆ ಜನಜೀವನ ತತ್ತರ; ಧರೆಗುರುಳಿದ ವಿದ್ಯುತ್ ಕಂಬ, ಮರಗಳು

Update: 2021-05-11 12:27 GMT

ಚಿಕ್ಕಮಗಳೂರು, ಮೇ 11: ಕಾಫಿನಾಡಿನಲ್ಲಿ ಒಂದೆಡೆ ಕೊರೋನ ಅಬ್ಬರಕ್ಕೆ ಜನರು ಕಂಗಾಲಾಗಿದ್ದರೆ, ಮತ್ತೊಂದೆಡೆ ನಿರಂತರ ಮಳೆಯಿಂದಲೂ ಜನರು ಹೈರಾಣಾಗಿದ್ದಾರೆ. ಮಂಗಳವಾರ ಜಿಲ್ಲಾದ್ಯಂತ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಮರಗಳು ಧರೆಗುರುಳಿದ ಪರಿಣಾಮ ವಿದ್ಯುತ್ ಕಂಬಗಳು ತುಂಡಾಗಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಕಳೆದೊಂದು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಧ್ಯಾಹ್ನದ ವೇಳೆ ಧಾರಾಕಾರ ಮಳೆಯಾಗುತ್ತಿದ್ದು, ಜಿಲ್ಲೆಯ ಬಯಲು ಭಾಗದಲ್ಲಿ ಆಗಾಗ್ಗೆ ಮಳೆಯಾಗುತ್ತಿತ್ತು. ಸೋಮವಾರ ಹಾಗೂ ಮಂಗಳವಾರ ಮಧ್ಯಾಹ್ನ ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿದಿದೆ. ಕಡೂರು, ತರೀಕೆರೆ ತಾಲೂಕುಗಳ ಅಲ್ಲಲ್ಲಿ ಮಂಗಳವಾರ ಉತ್ತಮ ಮಳೆ ಸುರಿದಿದೆ. ಧಾರಾಕಾರ ಮಳೆಯಿಂದಾಗಿ ನಗರ ಸೇರಿದಂತೆ ವಿವಿಧ ಪಟ್ಟಣಗಳು, ಚೆಕ್‍ಪೋಸ್ಟ್ ಗಳಲ್ಲಿ ಲಾಕ್‍ಡೌನ್ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್, ಗೃಹರಕ್ಷಕ ಸಿಬ್ಬಂದಿ ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಪರದಾಡಿದ ದೃಶ್ಯಗಳು ಸಾಮಾನ್ಯವಾಗಿದ್ದವು.

ಮಂಗಳವಾರ ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಸತತ ಮಳೆಯಿಂದಾಗಿ ಮಲೆನಾಡಿನಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳೂ ಸೇರಿದಂತೆ ಹಳ್ಳಕೊಳ್ಳಗಳಲ್ಲಿ ನೀರಿನ ಹರಿವಿನಲ್ಲಿ ಕೊಂಚ ಏರಿಕೆಯಾಗಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದೊಂದು ತಿಂಗಳಿನಿಂದ ಪ್ರತಿದಿನ ಸಂಜೆ, ರಾತ್ರಿ ಮಳೆಯಾಗುತ್ತಿರುವುದರಿಂದ ಕಾಫಿ, ಅಡಿಕೆ ತೋಟಗಳಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಸರಕಾರ ಜನತಾ ಕರ್ಫ್ಯೂ, ಲಾಕ್‍ಡೌನ್ ಜಾರಿ ಮಾಡಿರುವುದರಿಂದ ಕೃಷಿ ಕೆಲಸಗಳಿಗೆ ಕಾರ್ಮಿಕರನ್ನು ಕರೆ ತರಲು ರೈತರು ಪರದಾಡುವಂತಾಗಿದೆ. ಪೊಲೀಸರ ಭೀತಿಯಿಂದಾಗಿ ಕಾರ್ಮಿಕರ ಸಾಗಣೆ ವಾಹನ ಚಾಲಕರು ಮುಂದಾಗದ ಪರಿಣಾಮ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಇನ್ನು ನಿರಂತರ ಮಳೆಯಿಂದಾಗಿ ಮಲೆನಾಡಿನ ಗ್ರಾಮೀಣ ಭಾಗದ ಜನರು ರೋಸಿ ಹೋಗಿದ್ದು, ಮಳೆಗಾಲಕ್ಕೆ ಬೇಕಾಗುವ ಕಟ್ಟಿಗೆ ಸಂಗ್ರಹದಂತಹ ಕೆಲಸ ಕಾರ್ಯಗಳಿಗೆ ಧಾರಾಕಾರ ಮಳೆ ಅಡ್ಡಿಯಾಗಿದೆ.

ಇನ್ನು ಕಳೆದೊಂದು ತಿಂಗಳಿಂದ ಮಲೆನಾಡು ಭಾಗದಲ್ಲಿ ಸುರಿದ ಮಳೆ, ಗಾಳಿಗೆ ನೂರಾರು ಮರಗಳು ನೆಲಕ್ಕುರುಳಿದ ಸಂದರ್ಭ ವಿದ್ಯುತ್ ಕಂಬಗಳ ತಂತಿ ತುಂಡಾಗಿ ಗ್ರಾಮೀಣ ಭಾಗದಲ್ಲಿ ನೂರಾರು ವಿದ್ಯುತ್ ಕಂಬಗಳು ತುಂಡಾಗಿವೆ. ಮಲೆನಾಡಿನ ಹಲವಾರು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬಗಳನ್ನು ಬದಲಾಯಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸಲ್ಲಿ ನಿರತರಾಗಿದ್ದಾರೆ. ಒಟ್ಟಾರೆ ಕೊರೋನ ಕರ್ಫ್ಯೂವಿನ ಮಧ್ಯೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಜನಜೀವನವನ್ನು ಮತ್ತಷ್ಟು ಹೈರಾಣಾಗುವಂತೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News