ಮಹಿಳೆ ಶಂಕಾಸ್ಪದ ಸಾವು: ಪತಿ, ಕುಟುಂಬಸ್ಥರಿಂದ ಕೊಲೆ- ಆರೋಪ
ಬೆಂಗಳೂರು, ಮೇ 11: ಆರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮಹಿಳೆಯೊಬ್ಬರು ಶಂಕಾಸ್ಪದವಾಗಿ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕಸಘಟ್ಟದಲ್ಲಿ ನಡೆದಿದೆ.
ಕಸಘಟ್ಟ ಗ್ರಾಮದ ಮೋನಿಷಾ(20) ಮೃತಪಟ್ಟವರು ಎಮದು ತಿಳಿದುಬಂದಿದ್ದು, ವರದಕ್ಷಿಣೆ ಕಿರುಕುಳ ನೀಡಿ ಪತಿ ಹಾಗೂ ಆತನ ಮನೆಯವರು ಸೇರಿ ಕೊಲೆಗೈದಿದ್ದಾರೆಂದು ಮೋನಿಷಾಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಮೋನಿಷಾ ಅವರನ್ನು 6 ತಿಂಗಳ ಹಿಂದೆ ಮುತ್ತೇಗೌಡ ಎಂಬಾತನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆರಂಭದಲ್ಲಿ ದಂಪತಿ ಅನೋನ್ಯವಾಗಿದ್ದರು. ಆದರೆ, ಕೆಲದಿನಗಳಿಂದ ಮುತ್ತೇಗೌಡ ತವರಿನಿಂದ ಹಣ ತರುವಂತೆ ಪತ್ನಿಯನ್ನು ಕಾಡುತ್ತಿದ್ದ. ಇದರಿಂದ ಬೇಸತ್ತ ಮೋನಿಷಾ ತವರಿಗೆ ಬಂದಿದ್ದಳು. ಇತ್ತೀಚಿಗೆ ಆಕೆಯನ್ನು ಮತ್ತೆ ಪತಿಯ ಮನೆಗೆ ಬಿಟ್ಟು ಬರಲಾಗಿತ್ತು. ಮೋನಿಷಾಗೆ ಸೋಮವಾರ ಸಂಜೆ ಮೂರ್ಛೆ ಬಂದು ಸಾವನ್ನಪ್ಪಿರುವುದಾಗಿ ಪತಿಯ ಮನೆ ಕಡೆಯವರು ತಿಳಿಸಿದ್ದಾರೆ. ಆದರೆ ಬಲವಂತವಾಗಿ ವಿಷ ಕುಡಿಸಿ ಕೊಲೆಗೈದಿದ್ದಾರೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.
ಈ ಸಂಬಂಧ ದೊಡ್ಡ ಬೆಳವಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.