ಮೇ 12ರಿಂದ ಇಂದಿರಾ ಕ್ಯಾಂಟೀನ್‍ನಲ್ಲಿ ಉಚಿತ ಆಹಾರ ಪೊಟ್ಟಣಗಳ ವಿತರಣೆ: ಗೌರವ್‍ ಗುಪ್ತ

Update: 2021-05-12 06:01 GMT

ಬೆಂಗಳೂರು, ಮೇ 11: ಕೋವಿಡ್ ಹಿನ್ನಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಇಂದಿರಾ ಕ್ಯಾಂಟೀನ್‍ಗಳಲ್ಲಿ ನಾಳೆಯಿಂದ(ಮೇ 12) ಉಚಿತ ಆಹಾರದ ಪೊಟ್ಟಣಗಳ ವಿತರಣೆ ಮಾಡಲಾಗುವುದೆಂದು ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಇಂದಿರಾ ಕ್ಯಾಂಟೀನ್‍ಗಳಲ್ಲಿ ಮೇ 12ರಿಂದ ಬಡವರು, ವಲಸಿಗರು, ಕೂಲಿ ಕಾರ್ಮಿಕರಿಗೆ ದಿನದ ಮೂರು ಹೊತ್ತು(ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ) ಆಹಾರ ಪೊಟ್ಟಣಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಮೇ 12ರಿಂದ 24ರ ಲಾಕ್‍ಡೌನ್ ಅವಧಿ ಮುಗಿಯುವವರೆಗೆ ಉಚಿತವಾಗಿ ಆಹಾರ ಪೊಟ್ಟಣಗಳನ್ನು ವಿತರಿಸಲಾಗುತ್ತದೆ. ಇಂದಿರಾ ಕ್ಯಾಂಟೀನ್‍ನಲ್ಲಿ ಆಹಾರದ ಪೊಟ್ಟಣಗಳನ್ನು ಪಡೆಯಲು ಬರುವ ಫಲಾನುಭವಿಗಳು ಗುರುತಿನ ಚೀಟಿ(ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಡಿಎಲ್, ಕಾರ್ಮಿಕ ಇಲಾಖೆಯ ಗುರುತಿನ ಚೀಟಿ ಸೇರಿದಂತೆ ಇನ್ನಿತ್ಯಾದಿ ಗುರುತಿನ ಚೀಟಿಗಳನ್ನು) ಸರಬರಾಜುದಾರರಿಗೆ ತೋರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿಯೊಬ್ಬ ವ್ಯಕ್ತಿ, ಫಲಾನುಭವಿಗಳಿಗೂ ಗರಿಷ್ಠ 3 ಆಹಾರದ ಪೊಟ್ಟಣಗಳನ್ನು ನೀಡಲಾಗುವುದು ಅಥವಾ ಪಡಿತರ ಚೀಟಿಯಲ್ಲಿ ಕುಟುಂಬದ ಒಟ್ಟು ವ್ಯಕ್ತಿಗಳ ಸಂಖ್ಯೆಗೆ ಅನುಗುಣವಾಗಿ ಆಹಾರದ ಪ್ಯಾಕೆಟ್‍ಗಳನ್ನು ನೀಡಲಾಗುವುದು. ನಗರದ ಎಲ್ಲಾ ಇಂದಿರಾ ಕ್ಯಾಂಟೀನ್‍ಗಳಲ್ಲಿ ಊಟದ ಪೊಟ್ಟಣಗಳನ್ನು ಪಡೆಯಲು ಬರುವ ಫಲಾನುಭವಿಗಳು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತು ಆಹಾರ ಪೊಟ್ಟಣಗಳನ್ನು ಪಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News