ಶಿವಮೊಗ್ಗ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್ ಗೆ ತೀವ್ರ ವಿರೋಧ: ಹಳೆ ಮಾರ್ಗಸೂಚಿ ಮುಂದುವರಿಸಲು ಒತ್ತಾಯ

Update: 2021-05-11 13:48 GMT

ಶಿವಮೊಗ್ಗ, ಮೇ.11: ಶಿವಮೊಗ್ಗದಲ್ಲಿ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಿರುವ ಜಿಲ್ಲಾಡಳಿತದ ನಡೆಗೆ ಪ್ರಗತಿಪರ ಸಂಘಟನೆಗಳ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿ, ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದಾರೆ.

ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಗುರುವಾರದಿಂದ ರವಿವಾರದ ತನಕ ನಾಲ್ಕು ದಿನ ಲಾಕ್‌ಡೌನ್ ಘೋಷಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪನವರು ಘೋಷಣೆ ಮಾಡಿದ್ದಾರೆ. ಗುರುವಾರದಿಂದ ರವಿವಾರದವರೆಗೂ ಯಾರೂ ಮನೆಯಿಂದ ಅಗತ್ಯ ವಸ್ತುಗಳ ಖರೀದಿಗೂ ಹೊರ ಬರುವ ಹಾಗಿಲ್ಲವೆಂದು ಹೇಳಿದ್ದಾರೆ. ಇದು ಉಸ್ತುವಾರಿ ಸಚಿವರ ದುರುದ್ದೇಶಪೂರಿತ ತೀರ್ಮಾನವಾಗಿದೆ ಎಂದು ಮುಖಂಡರು ಆರೋಪಿಸಿದ್ದಾರೆ.

ನಾಗರಿಕರ ಹಿತಕ್ಕಿಂತ ರಮಝಾನ್ ಹಬ್ಬದಲ್ಲಿ ಅಲ್ಪಸಂಖ್ಯಾತ ಕೋಮಿನವರಿಗೆ ತೊಂದರೆ ಆಗಲಿ ಎಂಬ ಉದ್ದೇಶದಿಂದ ಸಚಿವರು ಹೊಸ ನಿಯಮ ಜಾರಿಗೊಳಿಸಿದ್ದಾರೆ. ಇದು ಖಂಡನೀಯ. ಲಾಕ್ ಡೌನ್ ನಿಯಮದಿಂದ ಜನರಿಗೆ ತೊಂದರೆಯಾಗಲಿದೆ. ಹಲವು ರೋಗಿಗಳು, ಹೋಮ್ ಐಸೋಲೆಷನ್‌ನಲ್ಲಿರುವವರು ಸೇರಿದಂತೆ ಹಸುಗೂಸುಗಳು, ವಯೋವೃದ್ದರಿಗೆ ಕೆಲವು ಅಗತ್ಯ ವಸ್ತುಗಳು ಬೇಕೇಬೇಕು. ನಗರದ ನಾಗರೀಕರ ಹಿತದೃಷ್ಟಿಯಿಂದ ಹಳೆ ಮಾರ್ಗಸೂಚಿಯಂತೆ ಬೆಳಗ್ಗೆ 6 ರಿಂದ 10 ರವರೆಗಿನ ರಿಯಾಯಿತಿ ಇರುವುದನ್ನೇ ಮುಂದುವರಿಸುವಂತೆ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ನಾಗರಿಕ ಸರ್ಕಾರವಾಗಿ ನಡೆದುಕೊಳ್ಳಬೇಕು. ಇಡೀ ಜಗತ್ತೇ ಕೊರೋನದಂತಹ ಮಹಾಮಾರಿಯ ಆತಂಕದಲ್ಲಿರುವಾಗ ಆಳುವ ಸರ್ಕಾರದ ಮಂತ್ರಿಯೊಬ್ಬರ ಕೋಮುದ್ವೇಷಕ್ಕೆ ಜನರ ನಾಗರಿಕ ಹಕ್ಕುಗಳನ್ನು ಬಲಿಕೊಡಬಾರದೆಂದು ಮುಖಂಡರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸ್ವರಾಜ್ ಇಂಡಿಯಾ ವಕ್ತಾರ ಕೆ.ಪಿ.ಶ್ರೀಪಾಲ್.ಡಿ.ಎಸ್.ಎಸ್ ಮುಖಂಡ ಎಂ.ಗುರುಮೂರ್ತಿ, ಪ್ರಗತಿಪರ ಹೋರಾಟಗಾರರಾದ ರಾಜೇಂದ್ರ ಚೆನ್ನಿ, ಪತ್ರಕರ್ತರಾದ ಶಿ.ಜು.ಪಾಶ,ಮುದಸಿರ್ ಅಹ್ಮದ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News