ಖಾಸಗಿ ಆಸ್ಪತ್ರೆಗಳ ಶೇ.50ರಷ್ಟು ಹಾಸಿಗೆ ಕೂಡಲೇ ಸರಕಾರದ ವ್ಯಾಪ್ತಿಗೆ ತನ್ನಿ: ಅಧಿಕಾರಿಗಳಿಗೆ ಆರ್.ಅಶೋಕ್ ಸೂಚನೆ

Update: 2021-05-11 14:40 GMT

ಬೆಂಗಳೂರು, ಮೇ 11: ಬಿಬಿಎಂಪಿ ವ್ಯಾಪ್ತಿಯಲ್ಲಿರುವ 20-30 ಹಾಸಿಗೆಗಳ ಆಸ್ಪತ್ರೆಗಳು ಹಾಗೂ 100ಕ್ಕಿಂತ ಹೆಚ್ಚು ಹಾಸಿಗೆಗಳ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಆಸ್ಪತ್ರೆಗಳನ್ನು ಪರಿಶೀಲನೆ ನಡೆಸಿ ಶೇ.50 ಹಾಸಿಗೆಗಳನ್ನು ಕೂಡಲೇ ವಶಕ್ಕೆ ಪಡೆದುಕೊಳ್ಳಬೇಕೆಂದು ಕಂದಾಯ ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಂಗಳವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಾಸಗಿ ಆಸ್ಪತ್ರೆಗಳ ಹಾಸಿಗೆ ಹಂಚಿಕೆ ಮತ್ತು ಲಭ್ಯತೆ ಸಂಬಂಧಿಸಿದಂತೆ ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ನೇತೃತ್ವದ ತಂಡವು ಹಾಸಿಗೆಗಳ ಲಭ್ಯತೆಯ ರಿಯಾಲಿಟಿ ಚೆಕ್ ನಡೆಸಿ ಎಷ್ಟು ಹಾಸಿಗೆಗಳಿವೆ ಎಂಬುದರ ನಿಖರ ಮಾಹಿತಿ ಪಡೆಯಬೇಕೆಂದು ತಿಳಿಸಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ನಗರದಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಹಾಸಿಗೆಗಳನ್ನು ವಶಪಡಿಸಿಕೊಳ್ಳಬೇಕು. ತಪ್ಪು ಮಾಹಿತಿ ನೀಡಿ ಹಾಸಿಗೆಗಳನ್ನು ನೀಡದಿರುವ ಆಸ್ಪತ್ರೆಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ಆಸ್ಪತ್ರೆಗಳ ಸಹಯೋಗದಲ್ಲಿ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಹೆಚ್ಚಿಸಬೇಕು. ಸ್ಟೆಪ್‍ಡೌನ್ ಆಸ್ಪತ್ರೆಯಲ್ಲಿ ಸದ್ಯ 960 ಹಾಸಿಗೆಗಳ ವ್ಯವಸ್ಥೆಯಿದ್ದು, ಅದನ್ನು ಕನಿಷ್ಠ 5,000 ಹಾಸಿಗೆಗಳಿಗೆ ಹೆಚ್ಚಳ ಮಾಡಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾತನಾಡಿ, ನಗದಲ್ಲಿರುವ ಕೆಲ ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೇ ಭೇಟಿ ಪರಿಶೀಲನೆ ನಡೆಸಿ ನಿಯಮಾನುಸಾರ ಹಾಸಿಗೆಗಳನ್ನು ನಿಡದ ಆಸ್ಪತ್ರೆಗಳಿಗೆ ನೋಟೀಸ್ ಜಾರಿಮಾಡಿ ಹಾಸಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ. 100ಕ್ಕಿಂತ ಹೆಚ್ಚು ಹಾಸಿಗೆಗಳಿರುವ ಆಸ್ಪತ್ರೆಗಳಿಗೆ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಮಾತನಾಡಿ, ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಸಂಬಂಧ ವಲಯವಾರು ಐಎಎಸ್ ಹಾಗೂ ಐಪಿಎಸ್ ನೇತೃತ್ವದ 9 ತಂಡಗಳನ್ನು ನಿಯೋಜಿಸಿದ್ದು, ಪ್ರಮುಖ 50 ಆಸ್ಪತ್ರೆಗಳಿಗೆ ನೋಡಲ್ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. 

ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.75 ಹಾಸಿಗೆಗಳನ್ನು ಮೀಸಲಿಡಬೇಕಿದ್ದು, ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ ನಿಯಮಾನುಸಾರ ಹಾಸಿಗೆಗಳನ್ನು ವಶಪಡಿಸಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News