ಲಾಕ್‍ಡೌನ್: ಯಾವುದೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಚಿಂತನೆ ಇಲ್ಲ; ಸಿಎಂ ಬಿಎಸ್‌ವೈ

Update: 2021-05-11 15:24 GMT

ಬೆಂಗಳೂರು, ಮೇ 11: ರಾಜ್ಯದಲ್ಲಿ ಕೋವಿಡ್ ಎರಡನೆ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೆ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಇದಕ್ಕಾಗಿ ಜನರ ಸಹಕಾರವೂ ಮುಖ್ಯ. ಆದರೆ, ಸರಕಾರದಿಂದ ಯಾವುದೇ ಬಗೆಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಚಿಂತನೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಮಂಗಳವಾರ ನಗರದ ಆರೋಗ್ಯ ಸೌಧದಲ್ಲಿರುವ ಕೋವಿಡ್ ವಾರ್ ರೂಮ್‍ಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ. ಆದರೂ, ಇಡೀ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಪೈಕಿ ನಮ್ಮ ರಾಜ್ಯದಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬಂದಿವೆ ಎಂದರು.

ಈ ಕೋವಿಡ್ ಮಹಾಮಾರಿಯ ವಿರುದ್ಧದ ಸಮರದಲ್ಲಿ ಜನರ ಸಹಕಾರ ಬಹಳ ಮುಖ್ಯ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಪ್ರತಿದಿನ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿರುವ ಅವಕಾಶ ಸಂದರ್ಭದಲ್ಲಿ ಮಾತ್ರ ಜನ ಹೊರಗೆ ಬರಬೇಕು. ಅನಗತ್ಯವಾಗಿ ಯಾರೂ ಹೊರಗಡೆ ಓಡಾಡಬಾರದು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

ಜೆಮ್ಶೇಡ್‍ಪುರದಿಂದ ಇಂದು ಬೆಳಗ್ಗೆ ಬೆಂಗಳೂರಿಗೆ 120 ಟನ್ ದ್ರವರೂಪದ ಆಮ್ಲಜನಕ ಬಂದಿದೆ. ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ನನ್ನ ಜೊತೆ ಮಾತನಾಡಿದ್ದಾರೆ. ಕೋವಿಡ್ ವಿರುದ್ಧದ ಹೋರಾಟಕ್ಕೆ ಕೇಂದ್ರ ಸರಕಾರದಿಂದ ಎಲ್ಲ ರೀತಿಯ ಸಹಕಾರವನ್ನು ಪ್ರಧಾನಿ ನೀಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಇವತ್ತು ರಾಜ್ಯಮಟ್ಟದ ವಾರ್ ರೂಮ್, ಆರೋಗ್ಯ ಸೌಧ ಹಾಗೂ ಮಲ್ಲೇಶ್ವರದಲ್ಲಿರುವ ಕೋವಿಡ್ ವಾರ್ ರೂಮ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇಡೀ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ನಮ್ಮ ವಾರ್ ರೂಮ್‍ಗಳು ಕಾರ್ಯನಿರ್ವಹಿಸುತ್ತಿವೆ. ನಮ್ಮ ವೈದ್ಯಕೀಯ ಸಿಬ್ಬಂದಿ ಕೋವಿಡ್ ನಿಯಂತ್ರಣಕ್ಕೆ ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೂ, ಕೋವಿಡ್ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಎಂದು ಮುಖ್ಯಮಂತ್ರಿ ತಿಳಿಸಿದರು.

500ಕ್ಕೂ ಹೆಚ್ಚು ಸೋಂಕಿತರು ಕನಿಷ್ಠ 10 ರಿಂದ 30 ದಿನಗಳ ವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ವೈದ್ಯರೂ ಸೂಚಿಸಿದರೂ ಮನೆಗಳಿಗೆ ತೆರಳುತ್ತಿಲ್ಲ. ಇದರಿಂದಾಗಿ, ಗಂಭೀರ ಸ್ವರೂಪದ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಗಿಗಳಿಗೆ ಹಾಸಿಗೆಗಳು ಸಿಗುತ್ತಿಲ್ಲ. ಆದುದರಿಂದ, ಅಂತಹ ರೋಗಿಗಳನ್ನು ಗುರುತಿಸಿ ಸ್ಪಷ್ಟ ಸೂಚನೆ ಕೊಟ್ಟು ಮನೆಗಳಿಗೆ ಕಳುಹಿಸಿಕೊಟ್ಟು ಅಗತ್ಯ ಚಿಕಿತ್ಸೆ ಮುಂದುವರೆಸುವಂತೆ ತಿಳಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಮ್ಮನ್ನು ಭೇಟಿಯಾದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ದಿಲ್ಲಿ ಮಟ್ಟದಲ್ಲಿ ಯಾವ ರೀತಿಯ ಸಹಕಾರ ಬೇಕು, ಇಲ್ಲಿನ ಪರಿಸ್ಥಿತಿ ಹೇಗಿದೆ ಇತ್ಯಾದಿ ವಿಚಾರಗಳ ಬಗ್ಗೆ ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ್ದೇವೆ ಎಂದರು.

ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆ ಕುರಿತು ಯಾವುದೇ ಸಮಸ್ಯೆಗಳು ಇಲ್ಲ. ಅನಗತ್ಯವಾಗಿ ಯಾರೂ ಗೊಂದಲಕ್ಕೀಡಾಗುವುದು ಬೇಡ. ಈಗಾಗಲೆ ಕೋವಿಡ್ ಲಸಿಕೆಗಳನ್ನು ತರಿಸಿಕೊಳ್ಳಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲಸಿಕೆ ಬರುತ್ತಿದ್ದಂತೆ ಎಲ್ಲರಿಗೂ ನೀಡಲಾಗುವುದು. ಜನ ಆಸ್ಪತ್ರೆಗಳ ಮುಂದೆ ಹೋಗಿ ಲಸಿಕೆಗಾಗಿ ಪರದಾಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News