ಲಾಕ್‍ಡೌನ್: ತೀವ್ರ ವಿರೋಧದ ಬಳಿಕ ಲಾಠಿ ಮುಟ್ಟದೆ ಕಾರ್ಯನಿರ್ವಹಿಸಿದ ಪೊಲೀಸರು

Update: 2021-05-11 15:54 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 11: ಕೋವಿಡ್ ಸಂಬಂಧ ಜಾರಿಗೊಳಿಸಿರುವ ಲಾಕ್‍ಡೌನ್ ಮಾದರಿಯ ಕರ್ಫ್ಯೂವಿನ ಎರಡನೇ ದಿನವಾದ ಮಂಗಳವಾರ ಪೊಲೀಸರು ಲಾಠಿ ಮುಟ್ಟದೆ ಕಾರ್ಯ ನಿರ್ವಹಿಸಿದರು.

ನಿನ್ನೆ ಎಲ್ಲೆಡೆ ಲಾಠಿ ಏಟಿನ ಕುರಿತು ಘಟನೆಗಳಿಗೆ ತೀವ್ರ ವಿರೋಧ ಬಂದ ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ಲಾಠಿ ಬಳಕೆ ಮಾಡದಂತೆ ಮೌಖಿಕ ಸೂಚನೆ ನೀಡಿದರು. ಈ ಹಿನ್ನೆಲೆ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಪೊಲೀಸರು ಲಾಠಿ ಮುಟ್ಟದೆ, ಸಾರ್ವಜನಿಕರ ಮಾಹಿತಿ ಕಲೆ ಹಾಕಿದರು.

ಎಂದಿನಂತೆ ಬೆಳಗ್ಗೆ 10 ಗಂಟೆಯ ಬಳಿಕ ಪೊಲೀಸರು ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಕರ್ತವ್ಯದಲ್ಲಿ ತೊಡಗಿದರು. ಈ ವೇಳೆ ಹಿರಿಯ ಅಧಿಕಾರಿಗಳು ಸಹ ಸಿಬ್ಬಂದಿಯ ವರ್ತನೆ ಮೇಲೆ ನಿಗಾವಹಿಸಿ, ನಗರ ಸಂಚಾರ ಮಾಡಿದರು.

ಅವಶ್ಯಕತೆ ಇದ್ದರೆ ಮಾತ್ರ ಲಾಠಿ ಬೀಸಿ: ಸುಖಾಸುಮ್ಮನೆ ಜನರಿಗೆ ಹೊಡೆಯಬೇಡಿ. ಅವಶ್ಯಕತೆ ಇದ್ದರೆ ಲಾಠಿ ಬಳಕೆ ಮಾಡಬೇಕು. ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಆಯಾ ಠಾಣೆಯ ಅಧಿಕಾರಿಗಳು ನಿಗಾವಹಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚಿಸಿದ್ದಾರೆ.

ಮೊದಲ ದಿನವಾದ ಸೋಮವಾರ ರಸ್ತೆಗಿಳಿದವರ ಕಾರಣ ಕೇಳದೆ ಪೊಲೀಸರು ದೌರ್ಜನ್ಯವೆಸಗಿರುವ ಆರೋಪಗಳು ಕೇಳಿಬಂದಿತ್ತು. ಸಾರ್ವಜನಿಕರು, ಪ್ರತಿಪಕ್ಷ ನಾಯಕರು ಭಾರೀ ಆಕ್ರೋಶ ಹೊರಹಾಕಿದ್ದರು. ತದನಂತರ, ಈ ಬಗ್ಗೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಲಾಠಿ ಬೀಸದೆ ಪರಿಶೀಲಿಸಿ ವಾಹನ ಜಪ್ತಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News