ರಾಜ್ಯದ ಎಲ್ಲ ಕೋವಿಡ್ ಆಸ್ಪತ್ರೆಗಳಲ್ಲಿ ಸಿಸಿಟಿವಿ ಕ್ಯಾಮರಾ: ಆರೋಗ್ಯ ಸಚಿವ ಡಾ.ಸುಧಾಕರ್

Update: 2021-05-11 16:27 GMT

ಬೆಂಗಳೂರು, ಮೇ 11: ಕೋವಿಡ್ ಹಾಸಿಗೆಗಳು ಹಾಗೂ ಚಿಕಿತ್ಸೆಯ ಕುರಿತು ನಿಗಾ ಇಡುವ ಸಲುವಾಗಿ ರಾಜ್ಯದ ಎಲ್ಲ ಕೋವಿಡ್ ಆಸ್ಪತ್ರೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ಈಗಾಗಲೇ ಆದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. 

ಮಂಗಳವಾರ ಎಲ್ಲ ಜಿಲ್ಲೆಗಳ ಆರೋಗ್ಯಾಧಿಕಾರಿಗಳೊಂದಿಗೆ ವೀಡಿಯೋ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಮುಂದಿನ ಒಂದು ವಾರದಲ್ಲಿ ರಾಜ್ಯದ ಎಲ್ಲ ಕೋವಿಡ್ ಆಸ್ಪತ್ರೆಗಳಲ್ಲಿ ಸಿಟಿ ಟಿವಿ ಕ್ಯಾಮೆರಾ ಅಳವಡಿಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಹೆಚ್ಚುತ್ತಿರುವ ಆಕ್ಸಿಜನ್ ಬೇಡಿಕೆ ತಗ್ಗಿಸಲು ಎಚ್‍ಎಫ್‍ಎನ್‍ಒ ಬದಲು ಪರ್ಯಾಯವಾಗಿ ವೆಂಟಿಲೇಟರ್ ಅಳವಡಿಸಲಾಗುವುದು. ಮಧ್ಯಮ ಪ್ರಮಾಣದ ಲಕ್ಷಣ ಇರುವ ಕೋವಿಡ್ ಸೋಂಕಿತರಿಗೆ ನಿಮಿಷಕ್ಕೆ 20-60 ಲೀಟರ್ ಆಮ್ಲಜನಕ ಬೇಕಾಗುತ್ತದೆ. ಆಮ್ಲಜನಕದ ಸಮಸ್ಯೆ ಇರುವುದರಿಂದ ಬೇರೆ ಕ್ರಮ ವಹಿಸಬೇಕಿದೆ. ಇದಕ್ಕಾಗಿ ಎಚ್‍ಎಫ್‍ಎನ್‍ಒಗಿಂತ ಹೆಚ್ಚು ಪರಿಣಾಮಕಾರಿಯಾಗಿ ಎನ್‍ಐವಿ (ವೆಂಟಿಲೇಟರ್) ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಶೇ.80 ರಷ್ಟು ಆಕ್ಸಿಜನ್ ಬೇಡಿಕೆ ಕಡಿಮೆಯಾಗುತ್ತದೆ. ಎಚ್‍ಎಫ್‍ಎನ್‍ಒ ಇರುವಲ್ಲಿ ಎಫಐವಿ ವೆಂಟಿಲೇಟರ್ ಅಳವಡಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಳೆದ ಏಳೆಂಟು ತಿಂಗಳ ಪ್ರಯತ್ನದಿಂದಾಗಿ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ 6 ವೆಂಟಿಲೇಟರ್ ಅಳವಡಿಸಬೇಕೆಂದು ಕ್ರಮ ವಹಿಸಲಾಗಿದೆ. ಆದರೆ ಕೆಲ ಆಸ್ಪತ್ರೆಯಲ್ಲಿ ತಜ್ಞರು ಇಲ್ಲದೆ, ವೆಂಟಿಲೇಟರ್ ಇದ್ದರೂ ಆಕ್ಸಿಜನ್ ಮಾತ್ರ ಬಳಸಲಾಗುತ್ತಿದೆ. ಈ ಸಮಸ್ಯೆ ಪರಿಹರಿಸಲು ಅರವಳಿಕೆ ತಜ್ಞರು, ವೈದ್ಯರನ್ನು ತಾತ್ಕಾಲಿಕವಾಗಿ ನಿಯೋಜಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ. 

ಕೋವಿಡ್ ಪ್ರಮಾಣ ಕೆಲ ಜಿಲ್ಲೆಗಳಲ್ಲಿ ಹೆಚ್ಚುತ್ತಿದ್ದು, ಇದಕ್ಕೆ ಕಾರಣ ತಿಳಿಯಬೇಕಿದೆ. ಪಾಸಿಟಿವ್ ಬಂದ ಕೂಡಲೇ ತಕ್ಷಣ ಚಿಕಿತ್ಸೆ ಆರಂಭಿಸಬೇಕಿದೆ. ಪಾಸಿಟಿವ್ ಇಲ್ಲದೆ, ಲಕ್ಷಣ ಇದ್ದರೂ ಅವರನ್ನು ಕೋವಿಡ್ ಪಾಸಿಟಿವ್ ಎಂದೇ ಪರಿಗಣಿಸಿ ಚಿಕಿತ್ಸೆ ಕೊಡಬೇಕೆಂದು ಸೂಚಿಸಲಾಗಿದೆ. ರಾಜ್ಯದಲ್ಲಿ ಶೇ.33.09 ಪಾಸಿಟಿವಿಟಿ ದರ ಇದೆ. ಈ ದರವನ್ನು ಶೇ.5ಕ್ಕೆ ಇಳಿಸುವ ಗುರಿ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News