ವ್ಯಾಪಾರ ಕಸಿದ ಲಾಕ್‌ಡೌನ್: ಬೆಂಗಳೂರಿನಲ್ಲಿ ಹೂಗಳನ್ನು ರಸ್ತೆಗೆ ಸುರಿದು ರೈತರ ಆಕ್ರೋಶ

Update: 2021-05-11 16:39 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 11: ರಾಜ್ಯ ಸರಕಾರ ಏಕಾಏಕಿ ಜಾರಿಗೊಳಿಸಿರುವ ನಿಯಮಗಳಿಂದ ಹೂ ಮಾರುಕಟ್ಟೆಗೆ ತೀವ್ರ ಹೊಡೆತ ಬಿದ್ದಿದ್ದು, ಮಾರುಕಟ್ಟೆಗೆ ತಂದ ಹೂಗಳು ಮಾರಾಟವಾಗದ ಹಿನ್ನೆಲೆ ರೈತರು ರಸ್ತೆಗೆ ಸುರಿದು ಆಕ್ರೋಶ ಹೊರ ಹಾಕಿದರು.

ಮಂಗಳವಾರ ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ರೈತರು ತಾವು ಬೆಳೆದ ಹೂಗಳನ್ನು ಕೆ.ಆರ್. ಮಾರುಕಟ್ಟೆಗೆ ಮಾರಾಟ ಮಾಡಲು ತಂದಿದ್ದರು. ಆದರೆ, ಲಾಕ್‍ಡೌನ್ ಹಿನ್ನೆಲೆ ಬೆಳಗ್ಗೆ 10 ಗಂಟೆಗೆ ಅಂಗಡಿಗಳನ್ನು ಬಂದ್ ಮಾಡಿದ ಕಾರಣ, ಹೂಗಳನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ದೊಡ್ಡಬಳ್ಳಾಪುರ ರೈತ ನಾರಾಯಣಪ್ಪ, ಸುಮಾರು ಎಂಟು ತಿಂಗಳ ಕಾಲ ಕಷ್ಟಪಟ್ಟು ಬೆಳೆದ ಗುಲಾಬಿ, ಸುಗಂಧರಾಜ ಹೂಗಳನ್ನು ರಸ್ತೆಗೆ ಸುರಿಯುತ್ತಿದ್ದೇನೆ. ಅಲ್ಲದೆ, ಸರಕಾರದ ನೀತಿ ನಿಯಮಗಳು ರೈತರ ವಿರೋಧಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಮಾತನಾಡಿದ ಕೆ.ಆರ್ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಿಎಮ್ ದಿವಾಕರ್, ಹೂವು ಮಾತ್ರ ಜೆಸಿ ರಸ್ತೆಯಲ್ಲಿ ಮಾರಾಟ ಮಾಡಲಾಗಿತ್ತು. ಆದರೆ, ಈಗ ಅದಕ್ಕೂ ಅವಕಾಶ ನೀಡಿಲ್ಲ. ಹೂವುಗಳು ಒಂದೇ ದಿನಕ್ಕೆ ಹಾಳಾಗುತ್ತವೆ. ವ್ಯಾಪಾರ ಆಗದ ಕಾರಣ ರೈತರು ರಸ್ತೆಗೆ ಸುರಿಯುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News