ಮತ್ತೆ ಜೆಡಿಎಸ್ ಸೇರುವ ವದಂತಿ ಬಗ್ಗೆ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸ್ಪಷ್ಟನೆ

Update: 2021-05-11 18:15 GMT

ಮೈಸೂರು,ಮೇ.11: ಜೆಡಿಎಸ್ ಪಕ್ಷಕ್ಕೆ ಮತ್ತೆ ಹೋಗುತ್ತೇನೆ ಎಂಬುದು ಊಹಾ ಪೋಹ, ವಾಸ್ತವತೆಗೆ ದೂರವಾದ ವಿಚಾರ. ಎಚ್.ಡಿ.ದೇವೇಗೌಡರು ಮತ್ತು ನನಗೆ ಮನುಷ್ಯ ಸಂಬಂಧ ಇದೆ. ಹಾಗಾಗಿಯೇ ಅವರನ್ನು ಮೂರು ಬಾರಿ ದೂರವಾಣಿ ಮೂಲಕ ಸಂಪರ್ಕ ಮಾಡಿದ್ದೇನೆಯೇ ಹೊರತು ರಾಜಕೀಯ ಮಾತನಾಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸ್ಪಷ್ಟಪಡಿಸಿದರು.

“ಬಿಜೆಪಿಗೆ ಗುಡ್ ಬೈ ಹೇಳಲು ವಿಶ್ವನಾಥ್ ಚಿಂತನೆ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಸಂಪರ್ಕ ಸಾಧಿಸಿರುವ ವಿಶ್ವನಾಥ್” ಎಂಬ ಶೀರ್ಷಿಕೆಯಡಿ ಮೇ.11 ರಂದು “ವಾರ್ತಾಭಾರತಿ”ಯಲ್ಲಿ ಪ್ರಕಟಗೊಂಡ ಸುದ್ದಿಗೆ ಮಂಗಳವಾರ ದೂರವಾಣಿ ಮೂಲಕ ಸಂಪರ್ಕಿಸಿದ ವಿಶ್ವನಾಥ್, ನಾನು ಮತ್ತೆ ಜೆಡಿಎಸ್ ಪಕ್ಷಕ್ಕೆ ಹೋಗುತ್ತೇನೆ ಎಂಬುದು ಊಹಾ ಪೂಹ, ರಾಜಕಾರಣವೇ ಬೇರೆ ಮನುಷ್ಯ ಸಂಬಂಧವೇ ಬೇರೆ. ನಾನು ದೇವೇಗೌಡರೊಂದಿಗೆ ಮನುಷ್ಯ ಸಂಬಂಧ ಇಟ್ಟುಕೊಂಡಿದ್ದೇನೆ. ಅವರ ಋಣದಲ್ಲಿ ನಾನಿದ್ದೇನೆ. ಹಾಗಾಗಿಯೇ ಅವರ ಆರೋಗ್ಯ ವಿಚಾರಿಸಲು ಮೂರು ಬಾರಿ ದೂರವಾಣಿ ಮೂಲಕ ಮಾತನಾಡಿದ್ದೇನೆಯೇ ಹೊರತು ರಾಜಕೀಯ ಮಾತನಾಡಿಲ್ಲ ಎಂದು ತಿಳಿಸಿದರು.

ನಾನು ಯಾವುದೇ ಪಕ್ಷದಲ್ಲಿದ್ದರೂ ನನಗೆ ಸರಿಯಿಲ್ಲ ಅನ್ನಿಸಿದರೆ ಅವರ ವಿರುದ್ಧ ಮಾತನಾಡುತ್ತೇನೆ. ಈ ಹಿಂದೆ ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಸಚಿವರಾಗಿದ್ದಾಗಲೂ ಮಾತನಾಡಿದ್ದೇನೆ. ಎಸ್.ಎಂ.ಕೃಷ್ಣ ಸರ್ಕಾರದಲ್ಲೂ ಮಾತನಾಡಿದ್ದೇನೆ. ಈಗಲೂ ಮಾತನಾಡುತ್ತಿದ್ದೇನೆ. ನನ್ನ ರಾಜಕೀಯ ವಿಮರ್ಶನಾತ್ಮಕ ಶೈಲಿಯೇ ಬೇರೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು, ಮತ್ತು ಎಚ್.ಡಿ.ದೇವೇಗೌಡರ ಋಣದಲ್ಲಿ ನಾನು ಇದ್ದೇನೆ. ದೇವೇಗೌಡರು ಮತ್ತು ನನ್ನ ನಡುವೆ ಮನುಷ್ಯ ಸಂಬಂಧ ಗಟ್ಟಿಯಾಗಿದೆ. ಅವರು ನನಗೆ ಹುಣಸೂರಿನಲ್ಲಿ ಚುನಾವಣೆಗೆ ನಿಂತು ಗೆಲ್ಲಲು ಕಾರಣರಾಗಿದ್ದಾರೆ. ಅವರಿಗೆ ನನಗೂ ಮನುಷ್ಯ ಸಂಬಂಧ ಇದೆ. ಹಾಗಾಗಿ ನಾನು ಅವರಿಗೆ ಎಂದೆಂದು ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News