ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ರವೀಂದ್ರನಾಥ್ ಠ್ಯಾಗೂರ್ ಕೋವಿಡ್‍ನಿಂದ ನಿಧನ
ಬೆಂಗಳೂರು, ಮೇ 12: ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ರವೀಂದ್ರನಾಥ್ ಠ್ಯಾಗೂರ್(72) ಕೊರೋನ ಸೋಂಕಿನಿಂದ ನಿಧನರಾಗಿದ್ದಾರೆ.
ಕೊರೋನ ಸೋಂಕಿನಿಂದ ಬಳಲುತ್ತಿದ್ದ ಅವರು, ಹತ್ತು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ಅವರು ಪತ್ನಿ ಭಾಗ್ಯ, ಪುತ್ರಿ ಅನುಲೇಖ ಹಾಗೂ ಪುತ್ರ ಅಭಿಷೇಕ್ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ತಮ್ಮ ದಕ್ಷತೆ ಹಾಗೂ ಪ್ರಾಮಾಣಿಕ ಸೇವೆಯಿಂದ ಜನಮೆಚ್ಚುಗೆಗೆ ಪಾತ್ರರಾಗಿದ್ದ ಕೆವಿಆರ್ ಠ್ಯಾಗೋರ್, ಸುಚಿತ್ರ ಸಿನಿ ಅಕಾಡೆಮಿ, ಸುಚಿತ್ರ ಕಲ್ಚರಲ್ ಅಕಾಡೆಮಿಯ ಅಧ್ಯಕ್ಷರಾಗಿ ಸಕ್ರಿಯವಾಗಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾಗಿದ್ದ ಅವರು, ತಮ್ಮ ಕೇಂದ್ರ ಕಚೇರಿ ವಾರ್ತಾ ಸೌಧದ ಉದ್ಘಾಟನಾ ಸಮಾರಂಭಕ್ಕೆ ಹಿಂದೂ, ಮುಸಲ್ಮಾನ, ಕ್ರೈಸ್ತ ಹಾಗೂ ಸಿಖ್ ಸಮುದಾಯದ ಧರ್ಮ ಗುರುಗಳನ್ನು ಆಮಂತ್ರಿಸಿ ಪ್ರಾರ್ಥನೆ ಸಲ್ಲಿಸಲು ವ್ಯವಸ್ಥೆ ಮಾಡಿದ್ದರು. ಈ ಘಟನೆ ಅವರು ತಮ್ಮ ಇಡೀ ಅಧಿಕಾರಾವಧಿಯಲ್ಲಿ ಜನರ ನಡುವೆ ಸೌಹಾರ್ದತೆಯ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ.
ಸಂತಾಪ: ಹಿರಿಯ ನಿವೃತ್ತ ಐಪಿಎಸ್ ಅಧಿಕಾರಿ ಠಾಗೂರ್, ಸಹೃದಯಿ, ಹಸನ್ಮುಖಿ, ಆತ್ಮೀಯ ಗೆಳೆಯರಾಗಿದ್ದರು. ಅವರು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಕಡೆಗೆ ವಿಶೇಷ ಒಲವಿತ್ತು. ಹೀಗಾಗಿ ಅವರು ನಿವೃತ್ತಿಯ ನಂತರ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಸಂತಾಪ ವ್ಯಕ್ತಪಡಿಸಿದ್ದಾರೆ.