'ಪೊಲೀಸರಿಂದ ಲಾಠಿ ಚಾರ್ಜ್' ಎಂದು ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ: ಕಮಲ್ ಪಂತ್

Update: 2021-05-12 14:06 GMT

ಬೆಂಗಳೂರು, ಮೇ 12: ಲಾಕ್‍ಡೌನ್ ಜಾರಿ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದಾಗಿ ಹೇಳಿ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಪೊಲೀಸರ ಕುರಿತಾಗಿ ಸುಳ್ಳು ಸುದ್ದಿಯ ವಿಡಿಯೋ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಬುಧವಾರ ಟ್ವೀಟ್ ಮಾಡಿರುವ ಕಮಲ್ ಪಂತ್ ಅವರು, ಈ ಬಗ್ಗೆ ನಗರ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಒಬ್ಬರನ್ನು ಕರೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ವ್ಯಕ್ತಿಯೋರ್ವನನ್ನು ಸುತ್ತುವರೆದ ಪೊಲೀಸರು ಮನಬಂದಂತೆ ಲಾಠಿ ಏಟು ನೀಡುತ್ತಿದ್ದರು. ಕನ್ನಡದಲ್ಲಿ ಮಹಿಳೆಯ ಹಿನ್ನೆಲೆ ಧ್ವನಿಯಿದ್ದು, ಕರ್ನಾಟಕದಲ್ಲಿ ಲಾಕ್‍ಡೌನ್ ವೇಳೆ ಪೊಲೀಸರು ಹೊಡೆಯುತ್ತಿರುವುದಾಗಿ ಹೇಳುತ್ತಾ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಕರ್ನಾಟಕ ಪೊಲೀಸರ ವಿರುದ್ಧ ಜನರು ಕಿಡಿಕಾರಿದ್ದರು.

ಈ ಬಗ್ಗೆ ಪರಿಶೀಲಿಸಿದಾಗ, 2020ರ ಎ.20ರಂದು ಮಹಾರಾಷ್ಟ್ರದ ಮುಂಬೈನಲ್ಲಿ ನಡೆದ ಘಟನೆಯ ವಿಡಿಯೋ ಎಂದು ತಿಳಿದು ಬಂದಿದೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಕಂಡುಕೊಂಡು ಆಯುಕ್ತ ಕಮಲ್ ಪಂತ್, ಪ್ರಚೋದನೆಗೆ ಕಾರಣವಾಗುವ ಹಾಗೂ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ನಗರದ ದಕ್ಷಿಣ ವಿಭಾಗದ ಪೊಲೀಸರು ವೈರಲ್ ಆದ ಹಳೇ ವಿಡಿಯೋ ಬಗ್ಗೆ ತನಿಖೆ ನಡೆಸುತ್ತಿದ್ದು, ವಿಡಿಯೋ ಹಿನ್ನೆಲೆ ಧ್ವನಿಯನ್ನು ಪದ್ಮಾ ಹರೀಶ್ ನೀಡಿದ್ದರು ಎಂಬುದನ್ನು ಕಂಡುಕೊಂಡಿದ್ದಾರೆ. ಸದ್ಯ ಆಕೆಯ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಪದ್ಮಾ ಹರೀಶ್ ರ ತಾಯಿ ವರ್ಷಿಣಿ ಎಂಬವರನ್ನು ಠಾಣೆಗೆ ಕರೆದು ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News