ಉದ್ಯಮಿ ಬಿ.ಆರ್.ಶೆಟ್ಟಿ ವಿದೇಶ ಪ್ರಯಾಣಕ್ಕೆ ನಿರ್ಬಂಧ ವಿಧಿಸಿದ್ದ ಅಧಿಕಾರಿಗಳ ಕ್ರಮ ಎತ್ತಿ ಹಿಡಿದ ಹೈಕೋರ್ಟ್

Update: 2021-05-12 15:13 GMT

ಬೆಂಗಳೂರು, ಮೇ 12: ಸಾಲ ವಾಪಸ್ ನೀಡದೆ ವಂಚನೆ ಎಸಗಿದ ಆರೋಪ ಎದುರಿಸುತ್ತಿರುವ ಉದ್ಯಮಿ ಬಿ.ಆರ್.ಶೆಟ್ಟಿ ಅವರ ವಿದೇಶ ಪ್ರಯಾಣಕ್ಕೆ ನಿರ್ಬಂಧ ವಿಧಿಸಿದ್ದ ವಲಸೆ(ಬ್ಯೂರೋ ಆಫ್ ಇಮ್ಮಿಗ್ರೇಷನ್) ಅಧಿಕಾರಿಗಳ ಕ್ರಮವನ್ನು ಹೈಕೋರ್ಟ್ ವಿಭಾಗೀಯ ಪೀಠ ಎತ್ತಿ ಹಿಡಿದಿದೆ.

ಅಬುದಾಬಿಗೆ ಪ್ರಯಾಣಿಸದಂತೆ ನಿರ್ಬಂಧ ವಿಧಿಸಿದ್ದ ವಲಸೆ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಬಿ.ಆರ್.ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ವಜಾ ಮಾಡಿ ಆದೇಶಿಸಿತ್ತು. ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಶೆಟ್ಟಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಏಕಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿದಿದೆ.

ಏಕಸದಸ್ಯ ಪೀಠ 'ವಿದೇಶಕ್ಕೆ ಪ್ರಯಾಣಿಸುವ ಹಕ್ಕು ದೇಶದ ಪ್ರತಿಯೊಬ್ಬ ಪ್ರಜೆಗೂ ಇದೆ. ಆದರೆ, ಸಾರ್ವಜನಿಕ ಹಣವನ್ನು ತೆಗೆದುಕೊಳ್ಳುವ ವ್ಯಕ್ತಿಗಳು ಅದನ್ನು ಮರುಪಾವತಿಸುವ ತಮ್ಮ ಕರ್ತವ್ಯವನ್ನೂ ನಿಭಾಯಿಸಬೇಕು' ಎಂದು ತೀರ್ಪು ನೀಡಿತ್ತು.

ಏನಿದು ಪ್ರಕರಣ: ಯುಎಇಯಲ್ಲಿ ವ್ಯವಹಾರ ಹೊಂದಿರುವ ಉಡುಪಿ ಮೂಲದ ಬಿ.ಆರ್. ಶೆಟ್ಟಿ ಅವರು ನವೆಂಬರ್ 14ರಂದು ಅಬುದಾಬಿಗೆ ಪ್ರಯಾಣಿಸಲು ಮುಂದಾಗಿದ್ದರು. ಈ ವೇಳೆ ವಲಸೆ ಅಧಿಕಾರಿಗಳು ಬ್ಯಾಂಕ್ ಆಫ್ ಬರೋಡಾ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಲುಕ್ ನೋಟಿಸ್ ಮೇರೆಗೆ ಪ್ರಯಾಣವನ್ನು ತಡೆದಿದ್ದರು.

ವಲಸೆ ಅಧಿಕಾರಿಗಳು ಪ್ರಯಾಣಿಸಲು ಅನುಮತಿ ನಿರಾಕರಿಸಿ ನೀಡಿದ್ದ ಹಿಂಬರಹ ಹಾಗೂ ಬ್ಯಾಂಕ್ ಗಳ ಲುಕ್ ಔಟ್ ನೋಟಿಸ್ ರದ್ದು ಕೋರಿ ಡಾ. ಬಿ.ಆರ್.ಶೆಟ್ಟಿ ಹೈಕೋರ್ಟ್ ಗೆ 2020ರ ಡಿ.15ರಂದು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಶೆಟ್ಟಿ ಮನವಿ ತಿರಸ್ಕರಿಸಿತ್ತು. ಆ ಬಳಿಕ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ 2021ರ ಮಾ.9ರಂದು ಮೇಲ್ಮನವಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News