ಬೇಡಿಕೆ ಇಟ್ಟ 3 ಕೋಟಿ ಡೋಸ್ ಲಸಿಕೆಗೆಳಲ್ಲಿ ರಾಜ್ಯಕ್ಕೆ 7 ಲಕ್ಷ ಡೋಸ್ ಮಾತ್ರ ಬಂದಿದೆ: ಪಿ.ರವಿಕುಮಾರ್

Update: 2021-05-12 15:53 GMT

ಬೆಂಗಳೂರು, ಮೇ 12: `ಕೋವಿಡ್ ಲಸಿಕೆ ಪೂರೈಕೆಯಲ್ಲಿನ ವ್ಯತ್ಯಯದ ಹಿನ್ನೆಲೆಯಲ್ಲಿ 18ರಿಂದ 45 ವರ್ಷದೊಳಗಿನವರಿಗೆ ಕೋವಿಡ್ ಲಸಿಕೆ ವಿತರಣೆ ನೀಡುವುದಕ್ಕೆ ಇನ್ನೂ ಸಮಯವಾಗಲಿದೆ' ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಇಂದಿಲ್ಲಿ ಅಸಹಾಯಕತೆಯನ್ನು ಹೊರಹಾಕಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ರಾಜ್ಯ ಸರಕಾರ 3 ಕೋಟಿ ಡೋಸ್ ಲಸಿಕೆಗೆ ಬೇಡಿಕೆ ಇಟ್ಟಿದೆ. ಆದರೆ, ರಾಜ್ಯಕ್ಕೆ ಇದೀಗ 7 ಲಕ್ಷ ಡೋಸ್ ಮಾತ್ರ ಬಂದಿದೆ. ರಾಜ್ಯದ 200 ಕಡೆ ಲಸಿಕೆಯನ್ನು ಸಂಗ್ರಹ ಮಾಡಿದ್ದೇವೆ. ರಾಜ್ಯಕ್ಕೆ ಆರು ಕೋಟಿ ಡೋಸ್ ಬೇಕಾಗಿದೆ. 45 ವರ್ಷಕ್ಕಿಂತ ಕೆಳಗಿನವರಿಗೆ ಲಸಿಕೆ ಕೊಡಬೇಕಾಗಿದೆ' ಎಂದು ತಿಳಿಸಿದರು.

ಸ್ಪುಟ್ನಿಕ್ ಕಂಪೆನಿಯಿಂದ ಲಸಿಕೆ ನೀಡುವಂತೆ ಮಾತುಕತೆ ನಡೆಸಲಾಗಿದ್ದು, ಸದ್ಯದಲ್ಲೇ ಸ್ಪುಟ್ನಿಕ್ ಲಸಿಕೆ ಲಭ್ಯವಾಗಲಿದೆ. ರಾಜ್ಯದಲ್ಲಿ ಲಸಿಕೆ ಉತ್ಪಾದನೆಗೆ ಯಾವುದೇ ಕಂಪೆನಿ ಮುಂದೆ ಬಂದಿಲ್ಲ. ಲಸಿಕೆ ತಯಾರಿಸಲು ಯಾವುದಾದರೂ ಕಂಪೆನಿ ಮುಂದೆ ಬಂದರೆ ಅಂತಹ ಕಂಪೆನಿಗಳಿಗೆ ಸಹಾಯ ಮಾಡುತ್ತೇವೆ ಎಂದ ಅವರು, ರಾಜ್ಯಕ್ಕೆ ಕೊವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಯನ್ನೂ ಪೂರೈಸುವಂತೆ ಕೇಳಿದ್ದೇವೆ. ನಮಗೆ ಪೂರೈಕೆ ಆದಂತೆ ನಾವು ಲಸಿಕೆಯನ್ನು ನೀಡುತ್ತೇವೆ' ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರದಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪೂರೈಕೆ ಮಾಡುತ್ತಿದ್ದಾರೆ. ಪ್ರತಿ 15 ದಿನಕ್ಕೊಮ್ಮೆ 15 ಲಕ್ಷ ಡೋಸ್ ಲಸಿಕೆ ಪೂರೈಕೆಯಾಗುತ್ತಿದ್ದು, ಈಗ ನಮಗೆ 8 ಲಕ್ಷ ಡೋಸ್ ಲಸಿಕೆ ಪೂರೈಕೆ ಮಾಡಿದ್ದಾರೆ. ನಮಗೆ ಲಸಿಕೆ ಬಂದಂತೆ ನಾವು ಜನರಿಗೆ ಕೊಡುತ್ತಿದ್ದೇವೆ ಎಂದ ಅವರು, ಇದೀಗ 2ನೆ ಡೋಸ್ ಮಾತ್ರ ಕೊಡುತ್ತಿದ್ದೇವೆ, ಹೊಸದಾಗಿ ಯಾರಿಗೂ ಲಸಿಕೆಯನ್ನು ಕೊಡುತ್ತಿಲ್ಲ. ಕೇವಲ ಕರ್ನಾಟಕ ರಾಜ್ಯದಲ್ಲಿ ಮಾತ್ರ ಲಸಿಕೆ ಸಮಸ್ಯೆ ಆಗಿಲ್ಲ, ದೇಶದಲ್ಲಿಯೂ ಲಸಿಕೆ ಸಮಸ್ಯೆ ಇದೆ ಎಂದರು.

ಕೇಂದ್ರದ ಅನುಮತಿ ಪಡೆದು ಲಸಿಕೆ ನೀಡಬೇಕು. ಕಂಪೆನಿಗಳು ರಾಜ್ಯಕ್ಕೂ ಲಸಿಕೆಯನ್ನು ಪೂರೈಸಬೇಕಾಗಿದೆ. ಉತ್ಪಾದನೆಯಾಗುವ ಲಸಿಕೆಯಲ್ಲಿ ಶೇ.50ರಷ್ಟು ಮಾರಾಟ ಮಾಡಿ ಉಳಿದ ಶೇ.50ರಷ್ಟು ಕೇಂದ್ರಕ್ಕೆ ನೀಡಬೇಕಾಗಿದೆ. ಹೀಗಾಗಿ ಶೇ.50ರಷ್ಟು ಲಸಿಕೆ ಉತ್ಪಾದನೆಯಲ್ಲಿ ರಾಜ್ಯಗಳಿಗೆ ಹಂಚಿಕೆಯಾಗಲಿದೆ. ನಮ್ಮ ಬಳಿ ವ್ಯಾಕ್ಸಿನ್ ಇದ್ದಿದ್ದರೆ ಹಾಕುತ್ತಿದ್ದೆವು. ಆದರೆ, ಎಪ್ರಿಲ್ 2ನೆ ವಾರದಲ್ಲಿ ಲಸಿಕೆಗೆ ಆರ್ಡರ್ ನೀಡಿದ್ದು, ಮೇ 1ರಿಂದ ನಮಗೆ ಪೂರೈಕೆ ಮಾಡುತ್ತಿದ್ದಾರೆ. ಸದ್ಯ ಬೇರೆ ದೇಶಗಳಲ್ಲಿ ಉತ್ಪಾದಿಸುವ ಲಸಿಕೆ ಆಮದಿಗೂ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಜತೆಗೆ, 1 ಕೋಟಿ ಡೋಸ್ ನೀಡಲು ಭಾರತ್ ಬಯೋಟೆಕ್‍ಗೆ ಹಾಗೂ 2 ಕೋಟಿ ಡೋಸ್ ನೀಡಲು ಸೆರಮ್‍ಗೆ ಬೇಡಿಕೆ ಇಟ್ಟಿದ್ದೇವೆ. ಲಸಿಕೆ ತರಿಸಿಕೊಳ್ಳುವುದಕ್ಕೆ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ ಎಂದು ರವಿಕುಮಾರ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News