ರಾಜ್ಯದಲ್ಲಿ 18ರಿಂದ 45 ವರ್ಷದೊಳಗಿನವರಿಗೆ ಲಸಿಕೆ ವಿತರಣೆ ಅಭಿಯಾನ ತಾತ್ಕಾಲಿಕ ಸ್ಥಗಿತ

Update: 2021-05-12 17:18 GMT

ಬೆಂಗಳೂರು, ಮೇ 12: ಕೋವಿಡ್ ಲಸಿಕೆ ಉತ್ಪಾದನಾ ಕಂಪೆನಿಗಳು ಲಸಿಕೆ ಪೂರೈಕೆಯಲ್ಲಿನ ವ್ಯತ್ಯಯದ ಹಿನ್ನೆಲೆಯಲ್ಲಿ 18 ರಿಂದ 45 ವರ್ಷದೊಳಗಿನವರಿಗೆ ನೀಡಲು ಉದ್ದೇಶಿಸಿದ್ದ ಕೊರೋನ ವ್ಯಾಕ್ಸಿನ್ ಅಭಿಯಾನವನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲು ರಾಜ್ಯ ಸರಕಾರ ತೀರ್ಮಾನಿಸಿದೆ.

ಬುಧವಾರ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಕೋವಿಡ್ ಸೋಂಕು ನಿಯಂತ್ರಣ ಸಂಬಂಧ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು, ಪ್ರಸ್ತುತ ಲಭ್ಯವಿರುವ ಕೋವಿಡ್ ಲಸಿಕೆಯನ್ನು 45 ವರ್ಷದ ಮೇಲ್ಪಟ್ಟವರಿಗೆ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೆ, ಈಗಾಗಲೇ ಒಂದು ಡೋಸ್ ಹಾಕಿಸಿಕೊಂಡು ಎರಡನೆ ಡೋಸ್ ನಿರೀಕ್ಷೆಯಲ್ಲಿರುವ ಎಲ್ಲರಿಗೂ ಲಸಿಕೆ ಒದಗಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

18ರಿಂದ 45 ವರ್ಷದೊಳಗಿನವರಿಗೆ ಲಸಿಕೆ ಈಗಾಗಲೇ ಆರಂಭಿಸಲಾಗಿದ್ದು, 45 ವರ್ಷದ ಮೇಲ್ಪಟ್ಟವರಿಗೆ ಎರಡನೆ ಡೋಸ್ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಲಭ್ಯವಿರುವ ಲಸಿಕೆಯನ್ನು ಎರಡನೆ ಡೋಸ್ ನೀಡಲು ಮೊದಲ ಆದ್ಯತೆ ಕೊಡಿ ಎಂದು ನಿರ್ದೇಶನ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, 45 ವರ್ಷ ಮೇಲ್ಪಟ್ಟವರಿಗೆ ಸೆಕೆಂಡ್ ಡೋಸ್ ಪೂರ್ಣಗೊಂಡ ಬಳಿಕ 18-45ರ ವಯಸ್ಕರಿಗೆ ಲಸಿಕೆ ಹಾಕುವ ಕಾರ್ಯ ಆರಂಭಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕೋವಿಡ್ ಲಸಿಕೆ ಗೊಂದಲ ನಿವಾರಿಸಲು ಸೂಚನೆ: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ನಿಯಂತ್ರಣ ದೃಷ್ಟಿಯಿಂದ 18ರಿಂದ 45 ವರ್ಷದೊಳಗಿನವರಿಗೆ ಕೋವಿಡ್ ಲಸಿಕೆ ಹಾಕುವ ಸಂಬಂಧದ ಎಲ್ಲ ಗೊಂದಲಗಳನ್ನು ಆದಷ್ಟು ಶೀಘ್ರವೇ ಪರಿಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಸೂಚನೆ ನೀಡಿದರು.

ಸೆಕೆಂಡ್ ಡೋಸ್ ವ್ಯಾಕ್ಸಿನ್ ಪಡೆಯುವವರಿಗೆ ಮೊದಲ ಆದ್ಯತೆ ಕೊಡಬೇಕೆಂದು ಸೂಚಿಸಲಾಯಿತು. ಪ್ರತಿ ಜಿಲ್ಲೆಯ ವ್ಯಾಕ್ಸಿನ್ ಲಭ್ಯತೆ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಇರಬೇಕು ಎಂದು ಹೇಳಿದರು. ಕೋವಿಡ್ ವ್ಯಾಕ್ಸಿನ್ ಪೂರೈಸುವ ಕಂಪೆನಿಗಳ ಜೊತೆ ಅಧಿಕಾರಿಗಳು ನಿರಂತರವಾಗಿ ಸಂಪರ್ಕ ಇಟ್ಟುಕೊಳ್ಳಬೇಕು. ಅಲ್ಲದೆ, ನಿಗದಿತ ಅವಧಿಯೊಳಗೆ ಲಸಿಕೆ ಪೂರೈಕೆಗೆ ಕ್ರಮ ವಹಿಸಬೇಕು ಎಂದು ಸೂಚಿಸಿದ ಯಡಿಯೂರಪ್ಪ, ಕೊರೋನ ಲಸಿಕೆ ಸಂಬಂಧ ಉಂಟಾಗಿರುವ ಎಲ್ಲ ಗೊಂದಲಗಳನ್ನು ಪರಿಹರಿಸಲು ಜನರಲ್ಲಿ ಅಗತ್ಯ ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಗಳಲ್ಲಿ ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ಆಕ್ಸಿಜನ್ ಸಿಲಿಂಡರ್ ಲಭ್ಯತೆ ಇದ್ದು ಜಿಲ್ಲೆಗಳಲ್ಲಿ ಕೊರತೆ ಉಂಟಾದರೆ ಕೂಡಲೇ ಬಗೆಹರಿಸಬೇಕು. ಕೋವಿಡ್-19 ಸೋಂಕಿತರಿಗೆ ಆಕ್ಸಿಜನ್ ಮತ್ತು ಐಸಿಯು ಬೆಡ್‍ಗಳ ಸಂಖ್ಯೆ ಹೆಚ್ಚಿಸುವತ್ತ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮೇ 07, 2021 ರಿಂದ ರಾಜ್ಯ ಸರ್ಕಾರವು ಭಾರತ ಸರ್ಕಾರದಿಂದ 45+ ವಯೋಮಾನದವರ ಲಸಿಕಾಕರಣಕ್ಕಾಗಿ ಹಂಚಿಕೆಯಾದ ಲಸಿಕೆಗಳನ್ನು 2ನೇಯ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳ ಲಸಿಕಾಕರಣಕ್ಕೆ ಮಾತ್ರ ಬಳಸಲು ನಿರ್ಧರಿಸಿರುತ್ತದೆ. ಆದ್ದರಿಂದ ರಾಜ್ಯದಲ್ಲಿ ಇರುವ ಎಲ್ಲಾ ಲಸಿಕೆಗಳ ಪೂರ್ಣ ದಾಸ್ತಾನನ್ನು 2ನೇಯ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳ ಲಸಿಕಾಕರಣಕ್ಕೆ ಮಾತ್ರ ಬಳಸಲು ನಿರ್ಧರಿಸಿರುತ್ತದೆ. ಈ ಹಿನ್ನೆಲೆಯಲ್ಲಿ, 18 ರಿಂದ 44 ವರ್ಷ ವಯೋಮಾನದವರ ಕೋವಿಡ್ ಲಸಿಕಾಕರಣವನ್ನು (ಈಗಾಗಲೇ ಲಸಿಕೆಗಾಗಿ ಸಮಯ ನಿಗಧಿಪಡಿಸಿಕೊಂಡವರೂ ಸೇರಿದಂತೆ) ದಿನಾಂಕ 14.05.2021 ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಆದೇಶವು ಕೋವಿಡ್ ಲಸಿಕಾಕರಣ ನಡೆಸುತ್ತಿರುವ ಎಲ್ಲಾ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಿಗೆ ಅನ್ವಯಿಸುತ್ತದೆ

-ರಾಜ್ಯ ಆರೋಗ್ಯ ಇಲಾಖೆ ( ಟ್ವೀಟ್ )

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News