ಕುಂಭಮೇಳದಿಂದ ರಾಜ್ಯಕ್ಕೆ ಹಿಂದಿರುಗಿದ ಮಹಿಳೆಗೆ ಕೊರೋನ ಸೋಂಕು ದೃಢ

Update: 2021-05-12 17:05 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 12: ಕುಂಭಮೇಳದಿಂದ ರಾಜ್ಯಕ್ಕೆ ಹಿಂದಿರುಗಿದ 67 ವರ್ಷದ ಮಹಿಳೆಗೆ ಎಪ್ರಿಲ್ ಮೊದಲ ವಾರದಲ್ಲಿ ಕೋವಿಡ್ ಪಾಸಿಟಿವ್ ಆಗಿತ್ತು. ಅವರ 40 ವರ್ಷದ ಸೊಸೆ ಮನೋರೋಗ ಚಿಕಿತ್ಸಕಿಯಾಗಿ ಕೆಲಸ ಮಾಡುವ ನಂದಿನಿ ಲೇಔಟ್‍ನಲ್ಲಿರುವ ಖಾಸಗಿ ಆಸ್ಪತ್ರೆಯ 13 ರೋಗಿಗಳಿಗೂ ಸೋಂಕು ತಗುಲಿದ್ದ ಸಂಗತಿ ಬೆಳಕಿಗೆ ಬಂದಿದೆ.

ಮನೋರೋಗ ಚಿಕಿತ್ಸಕಿಗೆ ಕೋವಿಡ್‍ನ ಯಾವುದೆ ಲಕ್ಷಣಗಳು ಕಂಡು ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಕರ್ತವ್ಯವನ್ನು ಮುಂದುವರಿಸಿದ್ದರು. ಅಲ್ಲದೆ, ಆಸ್ಪತ್ರೆಯಲ್ಲಿನ 13 ಜನ ಮನೋರೋಗಿಗಳಿಗೆ ಅವರು ಚಿಕಿತ್ಸೆ ನೀಡುತ್ತಿದ್ದರು.

ಕುಂಭಮೇಳದಿಂದ ಹಿಂದಿರುಗಿದ್ದ ಅವರ ಅತ್ತೆಗೆ ಕೋವಿಡ್ ಪಾಸಿಟಿವ್ ಆಗಿರುವುದು ತಿಳಿದು, ಮನೋರೋಗ ಚಿಕಿತ್ಸಕಿ ತಾವಾಗಿಯೇ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಆಗ ಅವರಿಗೂ ಸೋಂಕು ತಗಲಿರುವುದು ತಿಳಿದು ಬಂದಿದೆ.

ಮನೋರೋಗ ಚಿಕಿತ್ಸಕಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದು ತಿಳಿಯುತ್ತಿದ್ದಂತೆ ಆಸ್ಪತ್ರೆಯವರು, ಅವರ ಸಂಪರ್ಕದಲ್ಲಿದ್ದವರಿಗೆಲ್ಲ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ಅವರು ಚಿಕಿತ್ಸೆ ನೀಡುತ್ತಿದ್ದ 13 ಮಂದಿ ರೋಗಿಗಳು ಹಾಗೂ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗೆ ಕೋವಿಡ್ ಸೋಂಕು ದೃಢಫಟ್ಟಿರುವುದು ತಿಳಿದು ಬಂದಿದೆ.

ಅಲ್ಲದೆ, ಕುಂಭಮೇಳದಿಂದ ಹಿಂದಿಗಿರುವ ಮಹಿಳೆಯಿಂದಾಗಿ ಅವರ ಕುಟುಂಬ ಸದಸ್ಯರ ಪೈಕಿ 18 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎನ್ನಲಾಗಿದೆ. 67 ವರ್ಷದ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

'ಆಸ್ಪತ್ರೆಯಲ್ಲಿನ ಸಿಬ್ಬಂದಿ ಹಾಗೂ ರೋಗಿಗಳಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಎಲ್ಲರೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಮನೋರೋಗ ಚಿಕಿತ್ಸಕಿಯ ಕುಟುಂಬ ಸದಸ್ಯರ ಮೂಲಕವೇ ಆಸ್ಪತ್ರೆಗೆ ಸೋಂಕು ಹರಡಿದೆಯೇ, ಇಲ್ಲವೇ ನಮಗೆ ಗೊತ್ತಿಲ್ಲ. ಆದರೆ, ನಮ್ಮ ಸಹೋದ್ಯೋಗಿಯೂ ಅವರ ಅತ್ತೆ ಕೋವಿಡ್ ಪಾಸಿಟಿವ್ ಆಗಿರುವುದು ಗೊತ್ತಾಗುತ್ತಿದ್ದಂತೆಯೇ ಆಸ್ಪತ್ರೆಗೆ ಬರುವುದನ್ನು ನಿಲ್ಲಿಸಿದರು' ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ.ಮಹೇಶ್ ಗೌಡ ಪ್ರತಿಕ್ರಿಯಿಸಿದ್ದಾರೆ.

ಪತ್ತೆ ಹಚ್ಚಿ

ಕುಂಭಮೇಳದಲ್ಲಿ ಭಾಗವಹಿಸಿ ರಾಜ್ಯಕ್ಕೆ ಹಿಂದಿರುಗಿರುವವರ ಬಗ್ಗೆ ಯಾವುದೆ ಮಾಹಿತಿ ಇಲ್ಲ. ಅವರು ಹಿಂದಿರುಗಿದ ಬಳಿಕ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದುದರಿಂದ, ಕುಂಭಮೇಳದಿಂದ ಹಿಂದಿರುಗಿರುವವರ ಪತ್ತೆ ಹಚ್ಚುವಂತೆ ತಜ್ಞರು ಸರಕಾರಕ್ಕೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News