ಅನ್ನಭಾಗ್ಯ ಕೊಟ್ಟವರು ನಾವು, ಸಾವಿನ ಭಾಗ್ಯ ಕೊಟ್ಟವರು ನೀವು: ಸರಕಾರದ ವಿರುದ್ಧ ಡಿಕೆಶಿ ವಾಗ್ದಾಳಿ

Update: 2021-05-12 17:23 GMT

ಬೆಂಗಳೂರು, ಮೇ 12: `ಇದು `ನಾಳೆ ಬಾ' ಸರಕಾರ, ಹಿಂದೆ ಜನತೆ ಮೌಢ್ಯತೆಯ ನಂಬಿಕೆಗೆ ಒಳಗಾಗಿ ಬಾಗಿಲಮೇಲೆ `ನಾಳೆ ಬಾ' ಎಂದು ಬರೆಯುವ ವಾಡಿಕೆ ಇತ್ತು. ಈ ಮೂಡ ಸರಕಾರವೂ ಜನತೆಗೆ ನೆರವು ನೀಡದೆ ಬಾಗಿಲು ಹಾಕಿ 'ನಾಳೆ ಬಾ' ಎಂಬ ಬೋರ್ಡ್ ಹಾಕಿದೆ. ಜನತೆ ಜೀವ ಉಳಿಸಿಕೊಳ್ಳಲು ಲಸಿಕೆಗಳಿಗಾಗಿ ಪರದಾಡುತ್ತಿದ್ದರೂ ಸರಕಾರ ಕಣ್ಮುಚ್ಚಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, `ಟೆಸ್ಟಿಂಗ್ ಪ್ರಮಾಣ ವ್ಯಾಪಕಗೊಳಿಸಿ ಸೋಂಕು ಕಂಡುಬಂದವರನ್ನು ಐಸೋಲೇಶನ್ ವ್ಯವಸ್ಥೆ ಮಾಡಿ, ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ ವ್ಯವಸ್ಥೆ ಮಾಡಿದರೆ ಸೋಂಕಿನ ನಿಯಂತ್ರಣ ಸಾಧ್ಯವೇ ಹೊರತು ಮರ್ಯಾದೆ ಉಳಿಸಿಕೊಳ್ಳಲು ಟೆಸ್ಟಿಂಗ್ ಪ್ರಮಾಣ ಕಡಿತಗೊಳಿಸಿದ ಮಾತ್ರಕ್ಕೆ ಸೋಂಕಿನ ಪ್ರಮಾಣ ಕಮ್ಮಿಯಾಗುವುದಿಲ್ಲ ಯಡಿಯೂರಪ್ಪ ಅವರೇ' ಎಂದು ತಿಳಿಸಿದ್ದಾರೆ.

ಟೆಸ್ಟ್, ಟ್ರಾಕ್, ಟ್ರೀಟ್ ಮೂರರಲ್ಲೂ ಸರಕಾರ ವಿಫಲಗೊಂಡಿದ್ದಕ್ಕೆ ಇದು ಸಾಕ್ಷಿ. ಕೋವಿಡ್ ನಡುವೆಯೂ ಕುಂಭಮೇಳಕ್ಕೆ ತೆರಳಿದವರು ಹಿಂತಿರುಗಿದಾಗ ತಪಾಸಣೆ ನಡೆಸಿ ಕ್ವಾರಂಟೈನ್ ನಿಯಮ ರೂಪಿಸದೆ ಇದ್ದಿದ್ದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ. ರಾಜ್ಯ ಕೋವಿಡ್ ಕ್ಯಾಪಿಟಲ್ ಎನಿಸಿಕೊಳ್ಳಲು ಬಿಜೆಪಿಯೇ ಕಾರಣ' ಎಂದು ಶಿವಕುಮಾರ್ ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ದೇಶದಲ್ಲಿ ನಂ 1 ಸೋಂಕಿತ ರಾಜ್ಯವಾದ ಬೆನ್ನಲ್ಲೇ ಬಿಜೆಪಿ ಸರಕಾರ ಮತ್ತೊಂದು ವಂಚನೆಗೆ ಮುಂದಾಗಿದೆ, ಕೋವಿಡ್ ಪರೀಕ್ಷೆ ಕಡಿತಗೊಳಿಸಿ ಸೋಂಕಿನ ಪ್ರಮಾಣ ಕಡಿಮೆ ತೋರಿಸುವ ಹುನ್ನಾರಕ್ಕೆ ನಡೆಸಿದೆ. ತನ್ನ ಅವೈಜ್ಞಾನಿಕ ಲಾಕ್‍ಡೌನ್ ಸಮರ್ಥಿಸಿಕೊಳ್ಳಲು ಇಂತಹ ಆತಂಕಕಾರಿಯ ವಾಮಮಾರ್ಗ ಹಿಡಿದಿದೆ ಬಿಜೆಪಿ ಸರಕಾರ' ಎಂದು ಶಿವಕುಮಾರ್ ತೀವ್ರವಾಗಿ ಟೀಕಿಸಿದ್ದಾರೆ.

ಜನಾಕ್ರೋಶ ಹೆಚ್ಚಿದಾಗ ದಿಕ್ಕು ತಪ್ಪಿಸಲು ನನ್ನ ಹಾಗೂ ನಮ್ಮ ನಾಯಕ ಸಿದ್ದರಾಮಯ್ಯ ಅವರನ್ನು ವೈಯುಕ್ತಿಕವಾಗಿ ಗುರಿಯಾಗಿಸುವ ತಂತ್ರ ಬಿಜೆಪಿಯದ್ದು. ಐಟಿ ಸೆಲ್‍ನಲ್ಲಿ ಹೇಳುವ ಈ ಸುಳ್ಳನ್ನ ಆಸ್ಪತ್ರೆಗಳ ಮುಂದೆ ನಿಂತು ಜನತೆಯ ಎದುರು ಹೇಳುವ ತಾಕತ್ತಿದೆಯೇ ಹೇಳಿ ನಿಮ್ಮ ನಾಯಕರಿಗೆ, 25 ಸಂಸದರಿಗೆ' ಎಂದು ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಹೌದು ಬಿಡಿ ಸಚಿವ ಕೆ.ಎಸ್.ಈಶ್ವರಪ್ಪ ಅವರೇ, ನಿಮ್ಮ ಮಾತು ಒಪ್ಪುತ್ತೇವೆ ರಾಜ್ಯದ ಬದುಕು ಉಳಿಸಲು ನೆರವು ನೀಡಿ ಎಂದರೆ ನೋಟ್ ಪ್ರಿಂಟ್ ಮಾಡ್ತಿಲ್ಲ ಎಂದ ನೀವು ಜನತೆಯನ್ನು 'ಹೆಣ'ವನ್ನಾಗಿಸಲು ಬಿಜೆಪಿ ಹಾಗೂ ಆರೆಸೆಸ್ಸ್ ತುಂಬಾ ಪ್ರಯತ್ನ ಮಾಡುತ್ತಿದ್ದಿರಿ! ನಿಮ್ಮ ಯೋಜನೆ `ಶವ ಭಾಗ್ಯ', `ಸ್ಮಶಾನ ಭಾಗ್ಯ' ಅಲ್ಲವೇ?' ಎಂದು ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜನತೆಗೆ ಸಾವಿನ ಭಾಗ್ಯ ಯೋಜನೆ ಜಾರಿಗೊಳಿಸಿದ ಬಿಜೆಪಿ ಸರಕಾರ, ಸ್ಮಶಾನದ ಎದುರೂ ಪ್ರಚಾರದ ತೆವಲು ತೀರಿಸಿಕೊಂಡ ತಾವು ತುತ್ತಿನ ಚೀಲದ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ. ಅದು ಶಾಸಕ ಭೈರತಿ ಸುರೇಶ್ ಅವರ ಸೇವೆಯ ರೇಷನ್ ಕಿಟ್, ಫೋಟೋ ಕೂಡ ಅವರದ್ದೇ, ಅದನ್ನ ನೋಡಲಾಗದ ನಿಮ್ಮ ಬುದ್ಧಿಗೆ ಅಷ್ಟೇ ಅಲ್ಲ ಕಣ್ಣಿಗೂ ಮಂಕು ಕವಿದಿದೆ' ಎಂದು ಅವರು ಕಿಡಿಕಾರಿದ್ದಾರೆ.

ಮಾನಗೆಟ್ಟ ಬಿಜೆಪಿಯವರೆ ನಿಮ್ಮವರೇ ನಿಮಗೆ ಮುಖಕ್ಕೆ ಉಗಿಯುತ್ತಿದ್ದಾರಲ್ಲ ಕೊಂಚವೂ ನಾಚಿಕೆ ಎನಿಸುತ್ತಿಲ್ಲವೇ? ತಜ್ಞರ ಎಚ್ಚರಿಕೆ ಕಡೆಗಣಿಸಿ ಮುಂಜಾಗ್ರತೆ ವಹಿಸದೆ ಜನತೆಯನ್ನು ಸಾವಿನ ದವಡೆಗೆ ದೂಡಿದ ತಾವು ಲಸಿಕೆ ನೀಡುವಲ್ಲಿಯೂ ವಿಫಲರಾಗಿದ್ದೀರಿ. ವಿಪಕ್ಷ ನಾಯಕರ ಟೀಕೆ ಮಾಡಿದಾಕ್ಷಣ ನಿಮ್ಮ ಲೋಪ ಮುಚ್ಚಲಾರವು' ಎಂದು ಶಿವಕುಮಾರ್ ಟೀಕಿಸಿದ್ದಾರೆ.

ಹೌದು ನಾವು ಅನ್ನ ಭಾಗ್ಯದಲ್ಲಿ ಅಕ್ಕಿ ಕೊಟ್ಟೆವು, ಇಂದಿರಾ ಕ್ಯಾಂಟೀನ್‍ನಲ್ಲಿ ಅನ್ನ ಕೊಟ್ಟೆವು. ನೀವು ಕೊಟ್ಟಿದ್ದು ಸಾವಿನ ಭಾಗ್ಯ, ಸ್ಮಶಾನ ಭಾಗ್ಯ. ನಿಮ್ಮ ಆಡಳಿತದಲ್ಲಿ ಜನರ ಬದುಕು ಹಸನಾಗುವುದಿರಲಿ ಸತ್ತರೂ ಸಂಸ್ಕಾರವಿಲ್ಲದಂತಾಗಿದೆ. ಜನ ಕ್ಯಾಕರಿಸಿ ಉಗಿಯುತ್ತಿದ್ದಾರೆ ಸ್ವಲ್ಪ ಆಚೆ ನೋಡಿ' ಎಂದು ಶಿವಕುಮಾರ್ ಟೀಕಿಸಿದ್ದಾರೆ.

ಆಕ್ಸಿಜನ್(ಆಮ್ಲಜನಕ), ಐಸಿಯು, ರೆಮಿಡಿಸಿವಿರ್, ಬೆಡ್, ಚಿಕಿತ್ಸೆ ಕೊಡಲಾಗದೆ ಜನರನ್ನು ಹಾದಿ ಬೀದಿಯಲ್ಲಿ ಕೊಲ್ಲುತ್ತಿರುವ ಬಿಜೆಪಿ ಸರಕಾರ, ಲಸಿಕೆ ವೈಫಲ್ಯದ ಬಗ್ಗೆ ಹೈಕೋರ್ಟ್ ತಪರಾಕಿ ಕೊಟ್ಟಿದ್ದು ಸಾಲಲಿಲ್ಲವೇ? ಬ್ಲೂ ಪ್ರಿಂಟ್ ಕೊಡಿ ಎಂದ ಹೈಕೋರ್ಟಿಗೂ ಇದೇ ಮಾತು ಹೇಳಬಲ್ಲಿರಾ? ಲಜ್ಜೆ ಬಿಟ್ಟರುವ ನಿಮ್ಮ ವಿರುದ್ಧ ಜನ ಏಳುವ ಕಾಲ ದೂರವಿಲ್ಲ' ಎಂದು ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ಹೃದಯ ಹೀನ ಬಿಜೆಪಿ ಸರಕಾರ, ಸಂಕಷ್ಟದಲ್ಲಿರುವ ಜನತೆಗೆ ರೇಷನ್ ಕಿಟ್ ಕೊಡಿ, ಪ್ಯಾಕೇಜ್ ನೀಡಿ ಎಂದರೆ ನೋಟ್ ಪ್ರಿಂಟ್ ಮಾಡ್ತಿಲ್ಲ ಎನ್ನುವ ನೀವು ಕಾಂಗ್ರೆಸ್‍ನ ಜನಪರ ನೆರವಿನ ಬಗ್ಗೆ ಕೊಂಕು ತೆಗೆಯುವ ಯೋಗ್ಯತೆ ನಿಮಗಿದೆಯೇ? ಅನ್ನಭಾಗ್ಯ ಕೊಟ್ಟವರು ನಾವು, ಸಾವಿನ ಭಾಗ್ಯ ಕೊಟ್ಟವರು ನೀವು, ಅಕ್ಕಿ ಕೇಳಿದ ಜನತೆಗೆ ಹೋಗಿ ಸಾಯ್ರಿ ಎಂದವರು ನೀವು'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News