×
Ad

ಮೋದಿಯಿಂದಾಗಿ ಬಹರೈನ್ ಆಕ್ಸಿಜನ್ ನೀಡಿದೆ ಎಂದು ಸಿ.ಟಿ. ರವಿ: ನೆಟ್ಟಿಗರಿಂದ ವ್ಯಾಪಕ ಟೀಕೆ

Update: 2021-05-12 23:13 IST

ಚಿಕ್ಕಮಗಳೂರು, ಮೇ 12: 'ಕಷ್ಟಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹರೈನ್ ದೇಶಕ್ಕೆ ವ್ಯಾಕ್ಸಿನ್ ಪೂರೈಕೆ ಮಾಡಿ ನೆರವು ನೀಡಿದ್ದರಿಂದಾಗಿಯೇ ಬಹರೈನ್ ದೇಶ ನಮ್ಮ ದೇಶಕ್ಕೆ ಆಕ್ಸಿಜನ್ ಕಳುಹಿಸಿದೆ. ಬಹರೈನ್‍ನಿಂದ ಬಂದ ಒಂದು ಟ್ಯಾಂಕರ್ ಆಕ್ಸಿಜನ್ ಅನ್ನು ನಮ್ಮ ಜಿಲ್ಲೆಗೆ ನೀಡಿದ್ದಾರೆ" ಎಂದು ಸಿ.ಟಿ.ರವಿ ಅವರು ಪ್ರಧಾನಿಯನ್ನು ಹೊಗಳಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ವಿಡಿಯೋ ಸಹಿತ ಪೋಸ್ಟ್‍ವೊಂದನ್ನು ಹಾಕಿದ್ದು, ಈ ಪೋಸ್ಟ್ ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು, ಸಿಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಳೆದ ಮಂಗಳವಾರ ಬಹರೈನ್ ದೇಶವು ಭಾರತಕ್ಕೆ ನೌಕಾ ಸೇನೆಯ ಯುದ್ಧ ನೌಕೆಗಳಲ್ಲಿ 40 ಟನ್ ಲಿಕ್ವಿಡ್ ಆಕ್ಸಿಜನ್ ಅನ್ನು ಮಂಗಳೂರು ಬಂದರು ಮೂಲಕಕ್ಕೆ ದೇಶಕ್ಕೆ ಪೂರೈಕೆ ಮಾಡಿದ್ದು, ಈ ಆಕ್ಸಿಜನ್‍ನಲ್ಲಿ 1 ಟ್ಯಾಂಕರ್ ಆಕ್ಸಿಜನ್ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಬಂದಿದೆ. ಮಂಗಳವಾರ ಸಂಜೆ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಆಕ್ಸಿಜನ್ ಪ್ಲಾಂಟ್‍ಗೆ ಈ ಟ್ಯಾಂಕರ್ ಬಂದಿದ್ದು, ಇದರ ವಿಡಿಯೋವನ್ನು ಶಾಸಕರ ಸಿ.ಟಿ.ರವಿ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ.

ವಿಡಿಯೋದೊಂದಿಗೆ ಅವರು, "ಯಾರಾದರೂ ಕಷ್ಟದಲ್ಲಿದ್ದಾಗ ನಾವು ಸಹಾಯ ಮಾಡಿದರೆ, ನಾವು ಕಷ್ಟದಲ್ಲಿದ್ದಾಗ ಅವರು ಸಹಾಯಕ್ಕೆ ಬರುತ್ತಾರೆ ಎನ್ನುವ ಮಾತು ಅಕ್ಷರಶಃ ಸತ್ಯ. ಭಾರತ ಕೊರೋನ ಸೋಂಕಿಗೆ ವಾಕ್ಸಿನ್ ಕಂಡು ಹಿಡಿದಾಗ ಪ್ರಧಾನಿ ಮೋದಿ ವ್ಯಾಕ್ಸಿನ್ ಅನ್ನು ಬಹರೈನ್ ದೇಶಕ್ಕೆ ನೀಡಿತ್ತು. ಇಂದು ನಮ್ಮ ದೇಶದಲ್ಲಿ ಆಖ್ಸಿಜನ್ ಕೊರತೆ ಉಂಟಾಗಿದ್ದು, ಇದು ಗೊತ್ತಾದ ಕೂಡಲೇ ಬಹರೈನ್ ದೇಶ ನೌಕಪಡೆಯ ಯುದ್ಧನೌಕೆಗಳಲ್ಲಿ ಆಕ್ಸಿಜನ್ ಕಳುಹಿಸಿದೆ. ಒಂದು ಟ್ಯಾಂಕ್ ಆಕ್ಸಿಜನ್ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಗೆ ಕೆಲವೇ ಮಂದಿ ಮೋದಿಗೆ ಧನ್ಯವಾದ ಎಂದು ಬರೆದುಕೊಂಡಿದ್ದರೆ, ಉಳಿದವರು ಸಿ.ಟಿ.ರವಿ ಹಾಗೂ ಪ್ರಧಾನಿ ವಿರುದ್ಧ ವ್ಯಾಪಕ ಟೀಕೆಗಳ ಸುರಿಮಳೆಗೈದಿದ್ದಾರೆ. "ಹೊರ ದೇಶಕ್ಕೆ ಲಸಿಕೆ ಕೊಡೋಕೆ ಆಗುತ್ತೆ, ನಮ್ಮ ಕರ್ನಾಟಕಕ್ಕೆ ಲಸಿಕೆ ಕೊಡೋಕೆ ಆಗಲ್ವಾ, ನಿನ್ನಂತಹ ಪ್ರಚಾರಬುರುಕ ಇರೋದ್ರಿಂದಲೇ ರಾಜ್ಯಕ್ಕೆ ಈ ಸ್ಥಿತಿ ಬಂದಿದೆ" ಎಂದು ಕನಕರಾಜ್ ಎಂಬವರು ಟೀಕಿಸಿದ್ದಾರೆ. "ಬೇರೆ ದೇಶದವರು ಆಕ್ಸಿಜನ್ ಕಳುಹಿಸಿದರೆ ಅದಕ್ಕೆ ಬೇರೆ ಯಾರದ್ದೋ ಪೋಸ್ಟರ್ ಹಾಕುವ ನಿಮ್ಮ ಜನ್ಮಕ್ಕೆ ನಾಚಿಕೆಯಾಗಬೇಕು, ಕರ್ನಾಟಕದ 25 ಮಂದಿ ಎಂಪಿಗಳು ಏನು ಮಾಡುತ್ತಿದ್ದಾರೆ" ಎಂದು ಮಹಂತೇಶ್ ಎಂಬವರು ಕಮೆಂಟ್ ಮಾಡಿದ್ದಾರೆ.

ಸಂದೀಪ್ ಸಿದ್ದರಾಜು ಎಂಬವರು, "ಸ್ವಾಮಿ ರವಿ ಅವರೇ, ಸುಪ್ರೀಂಕೋರ್ಟ್ ಆದೇಶದಿಂದ ರಾಜ್ಯ, ಜಿಲ್ಲೆಗೆ ಆಕ್ಸಿಜನ್ ಬಂದಿದೆ. ನಿಮ್ಮ ಮೋದಿಯಿಂದಲ್ಲ ಎಂದು ಬರೆದುಕೊಂಡಿದ್ದರೆ, ಕಿರಣ್ ಎಂಬವರು, "ನಿಮ್ಮ ಧರ್ಮ ಪ್ರಮುಖರ ಸಂಘ ಎಲ್ಲಿ ಹೋಗಿವೆ. ಈಗಾಲಾದರೂ ಎಲ್ಲ ಧರ್ಮದವರು ಒಂದೇ ಎಂಬುದನ್ನು ಅರ್ಥಮಾಡಿಕೊಳ್ಳಿ" ಎಂದು ಕಮೆಂಟಿಸಿದ್ದಾರೆ.

"ದೇಶದ ಜನರ ತೆರಿಗೆ ಹಣದಿಂದ ಮೋದಿ ಅಧಿಕಾರ ನಡೆಸುತ್ತಿದ್ದಾರೆ. ಬಹರೈನ್ ದೇಶಕ್ಕೆ ವ್ಯಾಕ್ಸಿನ್ ನೀಡಿದ್ದು, ಜನರ ಹಣದಿಂದಲೇ ಹೊರತು ಮೋದಿ ಅಥವಾ ಬಿಜೆಪಿಯವರ ಮನೆಯ ಹಣದಿಂದಲ್ಲ. ಜನರಿಂದಾಗಿಯೇ ಬಹರೈನ್ ದೇಶ ಆಕ್ಸಿಜನ್ ಕಳುಹಿಸಿದೆ. ನೀವು ಪ್ರಚಾರ ಪಡೆಯುವುದನ್ನು ಈ ಪರಿಸ್ಥಿತಿಯಲ್ಲೂ ಮುಂದುವರಿಸಿರುವುದು ನಾಚಿಕೆಗೇಡು ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, ಮುಂದೆ ಮೋದಿ ಹೆಸರು ಹೇಳಿಕೊಂಡು ಓಟು ಕೇಳಲು ಬಂದರೇ ಚಪ್ಪಲಿ ಏಟು ಎಂದೂ ಖಾರವಾಗಿ ಪ್ರತಿಕ್ರಿಯಿಸಿದ್ದು, ನೂರಾರು ಮಂದಿ ಸಿ.ಟಿ,ರವಿ ಅವರ ಪೋಸ್ಟ್ ಗೆ ವ್ಯಂಗ್ಯ, ಆಕ್ರೋಶದಿಂದ ಕಮೆಂಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News