ಕೊರೋನ 3ನೆ ಅಲೆ ಬರುವ ಸಾಧ್ಯತೆ ಹಿನ್ನೆಲೆ: ಕ್ರಿಯಾ ಯೋಜನೆ ವರದಿ ಕೇಳಿದ ಹೈಕೋರ್ಟ್

Update: 2021-05-12 17:45 GMT

ಬೆಂಗಳೂರು, ಮೇ 12: ಕೊರೋನ ಮೂರನೆ ಅಲೆ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಸರಕಾರ ಅದನ್ನು ಹೇಗೆ ನಿಭಾಯಿಸಲಿದೆ, ಸಿದ್ಧತೆಗಳೇನು ಎಂಬ ಬಗ್ಗೆ ಎರಡು ವಾರಗಳಲ್ಲಿ ಕ್ರಿಯಾ ಯೋಜನೆ ರೂಪಿಸಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಹಾಗೂ ಹಿರಿಯ ನ್ಯಾಯಮೂರ್ತಿ ಅರವಿಂದು ಕುಮಾರ್ ಅವರಿದ್ದ ವಿಭಾಗೀಯ ಪೀಠ ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ.

ಕೆಲ ಕಾಲ ಅರ್ಜಿಗಳ ವಿಚಾರಣೆ ನಡೆಸಿದ ಪೀಠ, ಕೋವಿಡ್ ಸವಾಲುಗಳನ್ನು ಎದುರಿಸಲು ಸಾಕಷ್ಟು ತಯಾರಿ ಬೇಕು. ಹೀಗಾಗಿ ಕೊರೋನ 3ನೆ ಅಲೆ ಎದುರಿಸಲು ಸರಕಾರ ಈಗಿನಿಂದಲೇ ಸಿದ್ಧತೆಮಾಡಿಕೊಳ್ಳಬೇಕು. ಅದಕ್ಕಾಗಿ ಅಗತ್ಯವಿರುವ ಬೆಡ್, ಔಷಧಿ, ಆಕ್ಸಿಜನ್, ವೈದ್ಯಕೀಯ ಸಿಬ್ಬಂದಿ ಎಷ್ಟು ಬೇಕೆಂದು ಅಂದಾಜು ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಎದುರಾಗಬಹುದಾದ ಕೊರೋನ 3ನೆ ಅಲೆ ಎದುರಿಸಲು ಕ್ರಿಯಾ ಯೋಜನೆ ಸಿದ್ದಪಡಿಸಿ, ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.

ಇದಕ್ಕೂ ಮುನ್ನ ಸರಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ರಾಜ್ಯದಲ್ಲಿ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲು 45,754 ಬೆಡ್‍ಗಳು, 5035 ಐಸಿಯು ಬೆಡ್‍ಗಳು, 4109 ವೆಂಟಿಲೇಟರ್ ಬೆಡ್‍ಗಳು ಲಭ್ಯ ಇವೆ. ಹಾಗಿದ್ದೂ ಕೇಂದ್ರದ ಯೋಜನೆಯಂತೆ 66,333 ಆಕ್ಸಿಜನ್ ಬೆಡ್‍ಗಳು ಹಾಗೂ 13,969 ಐಸಿಯು ಬೆಡ್ ಹಾಗೂ 8332 ವೆಂಟಿಲೇಟರ್ ಬೆಡ್‍ಗಳು ಬೇಕಿವೆ ಎಂದರು. ಅಂಕಿ ಅಂಶ ಪರಿಶೀಲಿಸಿದ ಪೀಠ, ರಾಜ್ಯದಲ್ಲಿ ಅಗತ್ಯಕ್ಕಿಂತ ಸಾಕಷ್ಟು ಬೆಡ್‍ಗಳ ಕೊರತೆ ಇದೆ ಎಂದು ಅಭಿಪ್ರಾಯಪಟ್ಟಿತಲ್ಲದೇ, ಮೂರನೇ ಅಲೆ ಎದುರಿಸುವ ಕುರಿತು ವಿವರಣೆ ಕೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News