ರಾಜ್ಯದಲ್ಲಿ 2ನೆ ಕೋವಿಡ್ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯ: ಸರಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2021-05-13 10:55 GMT

ಬೆಂಗಳೂರು, ಮೇ 13: ರಾಜ್ಯದಲ್ಲಿ ಕೋವಿಡ್ 2ನೆ ಡೋಸ್ ವ್ಯಾಕ್ಸಿನ್ ಪೂರೈಕೆಯಲ್ಲಿನ ವ್ಯತ್ಯಯದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಲಸಿಕೆ ತರಿಸಲು ನಿಮ್ಮಿಂದಾಗದೇ ಇದ್ದರೆ ಅದನ್ನೇ ಜನರಿಗೆ ಹೇಳಿ. ಅವರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಬೇಡಿ ಎಂದು ವಾಗ್ದಾಳಿ ನಡೆಸಿದೆ. 

ಕೊರೋನ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 

ಮೊದಲನೆ ಡೋಸ್ ಪಡೆದುಕೊಂಡವರಿಗೆ ಎರಡನೆ ಡೋಸ್ ನೀಡಲು ವ್ಯಾಕ್ಸಿನ್ ಇಲ್ಲ ಎಂದು ಸರಕಾರಿ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡುತ್ತಿದ್ದಂತೆಯೇ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿಗಳು, ರಾಜ್ಯದಲ್ಲಿ 6 ಕೋಟಿಗೂ ಹೆಚ್ಚಿನ ಜನಸಂಖ್ಯೆ ಇದೆ. ಸರಕಾರ ಒಂದು ಪರ್ಸೆಂಟ್ ಜನರಿಗೂ ವ್ಯಾಕ್ಸಿನ್ ಹಾಕಿಲ್ಲ. ಇದೇನಾ ನಿಮ್ಮ ವ್ಯಾಕ್ಸಿನೇಷನ್ ಕಾರ್ಯಕ್ರಮದ ರೀತಿ. 31 ಲಕ್ಷ ಜನರಿಗೆ ಎರಡನೆ ಡೋಸ್‌ನ್ನು ತುರ್ತಾಗಿ ನೀಡಬೇಕಿದೆ. ಇದನ್ನು ಯಾವಾಗ ಒದಗಿಸುತ್ತೀರಿ ಹೇಳಿ. ನಿಮ್ಮಿಂದ ಸಾಧ್ಯವಾಗದಿದ್ದರೆ ಹೇಳಿ. ಅದನ್ನೇ ನ್ಯಾಯಾಲಯ ದಾಖಲಿಸಿಕೊಳ್ಳಲಿದೆ ಎಂದು ಕಟುವಾಗಿ ಟೀಕಿಸಿತು. ಅಲ್ಲದೇ, ಮುಂದಿನ ಎರಡು ದಿನಗಳಲ್ಲಿ ವ್ಯಾಕ್ಸಿನೇಷನ್ ನೀಡುವಂತೆ ಆದೇಶಿಸುತ್ತೇವೆ ಎಂದು ಎಚ್ಚರಿಕೆ ನೀಡಿತು.

ವ್ಯಾಕ್ಸಿನೇಷನ್ ಕೊರತೆಗೆ ಸಂಬಂಧಿಸಿದಂತೆ ಪೀಠ ಕೇಂದ್ರ ಸರಕಾರದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿತು. ಮೊದಲನೆ ಡೋಸ್ ತೆಗೆದುಕೊಂಡವರಿಗೆ 2ನೆ ಡೋಸ್ ಸಿಕ್ಕಿಲ್ಲ. 2ನೆ ಡೋಸ್ ತೆಗೆದುಕೊಳ್ಳುವುದು ಜನರ ಹಕ್ಕಲ್ಲವೇ. ಈ ಹಿಂದಿನ ಅಂಕಿ ಅಂಶಗಳ ಮಾಹಿತಿಯಂತೆ ರಾಜ್ಯದಲ್ಲಿ ತುರ್ತಾಗಿ 26 ಲಕ್ಷ ಜನರಿಗೆ ವ್ಯಾಕ್ಸಿನ್ ನೀಡಬೇಕಿದೆ. ಈ ಅಂತರವನ್ನು ಹೇಗೆ ಸರಿಪಡಿಸುತ್ತೀರಿ. ಡೋಸ್ ನೀಡುವುದು ವಿಳಂಬವಾದರೆ ವ್ಯಾಕ್ಸಿನೇಷನ್ ವಿಫಲವಾಗುವುದಿಲ್ಲವೇ ಎಂದು ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ಕೇಂದ್ರ ಸರಕಾರದ ಪರ ಎಎಸ್‌ಜಿ ಐಶ್ವರ್ಯ ಭಾಟಿ, ವ್ಯಾಕ್ಸಿನ್ ವಿಳಂಬವಾದರೆ ನಿಷ್ಪಲವಾಗುವುದಿಲ್ಲ. ಕೋವ್ಯಾಕ್ಸಿನ್ 2ನೆ ಡೋಸ್‌ಗೆ 6 ವಾರ ಕಾಲಾವಕಾಶವಿದೆ. ಕೋವಿಶೀಲ್ಡ್ಗೆ 8 ವಾರ ಕಾಲಾವಕಾಶವಿದೆ. ಕಾಲಮಿತಿ ಹೆಚ್ಚಿಸುವ ಬಗ್ಗೆ ತಜ್ಞರ ಸಮಿತಿಯೂ ಪರಿಶೀಲನೆ ನಡೆಸುತ್ತಿದ್ದು ಎರಡು ದಿನದಲ್ಲಿ ಅಭಿಪ್ರಾಯ ತಿಳಿಸಲಿದ್ದಾರೆ ಎಂದರು. ಅಲ್ಲದೇ, ಕೇಂದ್ರ ಸರಕಾರ ರಾಜ್ಯಗಳಿಗೆ ಮಾರ್ಗಸೂಚಿ ನೀಡಿ ಕೊಟ್ಟಿರುವ ಲಸಿಕೆಯಲ್ಲಿ ಶೇ.70ರಷ್ಟನ್ನು 2ನೆ ಡೋಸ್‌ಗೆ ಬಳಸಲು ತಿಳಿಸಿತ್ತು. ಆದರೆ ರಾಜ್ಯ ಮಾರ್ಗಸೂಚಿ ಪಾಲಿಸಿಲ್ಲ ಎಂದು ವಿವರಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠ, ಎರಡನೆ ಡೋಸ್ ನೀಡದಿದ್ದರೆ ಜನರು ಆರೋಗ್ಯಯುತವಾಗಿ ಜೀವಿಸುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ. ಹೀಗಾಗಿ ರಾಜ್ಯ ಸರಕಾರ ಕೂಡಲೇ 2ನೆ ಡೋಸ್ ಗೆ ಎಷ್ಟು ಪ್ರಮಾಣದ ವ್ಯಾಕ್ಸಿನ್ ಬೇಕು ಎಂಬುದರ ಬಗ್ಗೆ ಕೇಂದ್ರಕ್ಕೆ ಅಂಕಿ ಅಂಶಗಳನ್ನು ಒದಗಿಸಬೇಕು. ಕೇಂದ್ರ ಸರಕಾರ ಕೊರತೆ ಸರಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇನ್ನು ಕೇಂದ್ರ ಸರಕಾರ ರಾಜ್ಯಕ್ಕೆ 3 ಮಾರ್ಗಸೂಚಿ ಪತ್ರ ಬರೆದಿದ್ದು, ಅವನ್ನು ರಾಜ್ಯ ಸರಕಾರ ಏಕೆ ಪಾಲಿಸಿಲ್ಲ ಎಂಬುದಕ್ಕೆ ವಿವರಣೆ ನೀಡಬೇಕು. ಹಾಗೆಯೇ, 2ನೆ ಡೋಸ್ ವ್ಯಾಕ್ಸಿನೇಷನ್‌ಗೆ ಕೈಗೊಂಡ ಕ್ರಮಗಳ ಕುರಿತು ವರದಿ ನೀಡಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News