ಕಠಿಣ ಕ್ರಮಗಳಿಂದಾಗಿ ರಾಜ್ಯಾದ್ಯಂತ ಸೋಂಕಿತರ ಸಂಖ್ಯೆ ಇಳಿಕೆ: ಸಿಎಂ ಯಡಿಯೂರಪ್ಪ
ಬೆಂಗಳೂರು, ಮೇ 13: ಕಠಿಣ ಕ್ರಮಗಳಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೊರೋನ ಕೇಸ್ ಗಳ ಸಂಖ್ಯೆಯಲ್ಲಿ ಕಡಿಮೆಯಾಗಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಬೆಂಗಳೂರಿನಲ್ಲಿ 16 ಸಾವಿರ ಕೇಸ್ ಗಳು ಪತ್ತೆಯಾಗಿದ್ದವು. ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಅಭಿವೃದ್ದಿ ಪಡಿಸಲಾಗುತ್ತಿದೆ. 1.10 ಕೋಟಿ ಡೋಸ್ ಲಸಿಕೆ ಕೇಂದ್ರ ಸರಕಾರ ನೀಡಿದೆ. 3 ಕೋಟಿ ಲಸಿಕೆ ಖರೀದಿಗೆ ಈಗಾಗಲೇ ಆರ್ಡರ್ ನೀಡಲಾಗಿದೆ. 18-44 ವರ್ಷದೊಳಗಿನವರಿಗೆ ಲಸಿಕೆ ನೀಡಿಕೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ತಿಳಿಸಿದರು.
ಡಿಸಿಎಂ ಅಶ್ವತ್ಥನಾರಾಯಣ ಮಾತನಾಡಿ, ಸೋಂಕಿತರಿಗೆ ರಾಜ್ಯ ಸರಕಾರದ ವತಿಯಿಂದ ಉಚಿತ ಚಿಕಿತ್ಸೆ ನೀಡಲಾಗುವುದು. ರೆಮ್ ಡಿಸಿವಿರ್, ಇಂಜೆಕ್ಷನ್ ಹಾಗೂ ಟೆಸ್ಟಿಂಗ್ ಕಿಟ್ ಗಳ ಕೊರತೆ ಇಲ್ಲ. ಆಕ್ಸಿಜನ್ ಎಲ್ಲೂ ಕೊರತೆಯಾಗದಂತೆ ನಿಭಾಯಿಸಿದ್ದೇವೆ. ವಿದೇಶದಿಂದಲೂ ಆಕ್ಸಿಜನ್ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.