ಪ್ರಶ್ನೆ ಕೇಳದೆ ಪ್ರತಿಯೊಂದಕ್ಕೂ ಪ್ರಧಾನಿಯನ್ನು ಪ್ರಶಂಸಿಸುವ ಬಿಜೆಪಿ ಸಂಸದರನ್ನು ಕುಟುಕಿದ ನೆಟ್ಟಿಗರು

Update: 2021-05-13 14:27 GMT

ರಾಜ್ಯದಿಂದ ಸಂಸತ್ ಗೆ ಆಯ್ಕೆಯಾದ 25 ಬಿಜೆಪಿ ಸಂಸದರು ರಾಜ್ಯಕ್ಕೆ ಯಾವುದೇ ಅನುದಾನ ಒದಗಿಸುತ್ತಿಲ್ಲ, ಹೈಕಮಾಂಡ್ ಎದುರು ಮಾತನಾಡಲೂ ಹೆದರುತ್ತಾರೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಲೇ ಬಂದಿವೆ. ಜೊತೆಗೆ, ಪ್ರತಿಯೊಂದರಲ್ಲೂ ಪ್ರಧಾನಿ ಮೋದಿಯನ್ನು ಅಭಿನಂದಿಸುವಲ್ಲಿ ಮಾತ್ರ ನಿರತರಾಗಿರುತ್ತಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಕೇಂದ್ರದಿಂದ ಸಮರ್ಪಕವಾಗಿ ಸಹಾಯ ಪಡೆಯಲು ವಿಫಲವಾದರೂ ವಿದೇಶಗಳಿಂದ ಬರುವ ಸಹಾಯಕ್ಕೆ ಪ್ರಧಾನಿ ಕಾರಣ ಎಂಬಂತೆ ಟ್ವೀಟ್ ಮಾಡುತ್ತಾರೆ ಎಂಬ ಟೀಕೆಗಳು ವ್ಯಾಪಕವಾಗಿ ಕೇಳಿ ಬರುತ್ತವೆ. ಇದನ್ನೇ ವ್ಯಂಗ್ಯವಾಡಿರುವ ಸಾಮಾಜಿಕ ಜಾಲತಾಣ ಬಳಕೆದಾರರು ಇಂದು 25 ಬಿಜೆಪಿ ಸಂಸದರನ್ನು ಗೇಲಿ ಮಾಡುತ್ತಾ ವಿಶೇಷ ಅಭಿಯಾನ ನಡೆಸಿದ್ದಾರೆ.

ರಾಜ್ಯದಲ್ಲಾಗುವ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಬಿಜೆಪಿ ಸಂಸದರು ಪ್ರಧಾನಿ ಮೋದಿಯನ್ನು ಅಭಿನಂದಿಸಿ ಟ್ವೀಟ್ ಮಾಡುವುದನ್ನು ವ್ಯಂಗ್ಯವಾಡಿರುವ ನೆಟ್ಟಿಗರು #TweetLikeKarnatakaBJPMPs ಎಂಬ ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನ ನಡೆಸುತ್ತಿದ್ದಾರೆ. 'ಈಗ ಸೂರ್ಯ ಪಶ್ಚಿಮದ ಕಡೆ ಮುಳುಗಿಟ್ಟಿದ್ದಾನೆ ಧನ್ಯವಾದಗಳು ಮೋದಿಜಿ', ಇವತ್ತು ನಮ್ಮ ರೋಡಲ್ಲಿ ಬೀದಿನಾಯಿ 2 ಮರಿ ಹಾಕಿತು ಧನ್ಯವಾದಗಳು ಮೋದಿ ಜೀ' ಎಂದು ಲೇವಡಿ ಮಾಡಿದ್ದಾರೆ.

#TweetLikeKarnatakaBJPMPs ಹ್ಯಾಶ್ ಟ್ಯಾಗ್ ಮೂಲಕ ಸಾವಿರಾರು ಮಂದಿ ಟ್ವೀಟ್ ಮಾಡಿದ್ದು, ಈ ಮೂಲಕ ರಾಜ್ಯದ 25 ಬಿಜೆಪಿ ಸಂಸದರನ್ನು ವಿನೂತನ ಶೈಲಿಯಲ್ಲಿ ವ್ಯಂಗ್ಯವಾಡಿದ್ದಾರೆ.

''ದೂರದ ಬಂಗಾಳ ದಿಂದ ತಮಿಳುನಾಡಿಗೆ 2 ಆಕ್ಸಿಜನ್ ಕಂಟೈನರ್ ರೈಲಿನಲ್ಲಿ ಬಂದಿದೆ, ವೀಡಿಯೋ ಕೃಪೆ: ಮಾನ್ಯ ರೈಲ್ವೇ ಸಚಿವರು ಪಿಯೋಷ್ ಗೋಯಲ್. ನೀವೇ ನೋಡಿ ಸಾರ್. ನನಗೇನು ಗೊತ್ತಿಲ್ಲಾ ಸಾರ್. ಅವರು ತುಂಬಾ ಒಳ್ಳೆಯವರು ಸಾರ್. ಮೋದಿಯವರಿಗೆ ಧನ್ಯವಾದಗಳು ಎಂದು ಪ್ರಕಾಶ್ ಎಂಬವರು ವ್ಯಂಗ್ಯವಾಡಿದ್ದಾರೆ.

ಇವತ್ತು ನಮ್ಮ ರೋಡಲ್ಲಿ ಬೀದಿನಾಯಿ 2 ಮರಿ ಹಾಕಿತು...ಒಂದು ಗಂಡು ಮತ್ತೊಂದು ಹೆಣ್ಣು...ಧನ್ಯವಾದಗಳು ಮೋದಿ ಜೀ. #TweetLikeKarnatakaBJPMPs ಎಂದು ಕುಶಾಲ್ ಬಿದರೆ ಎಂಬವರು ಲೇವಡಿ ಮಾಡಿದ್ದಾರೆ.

'ಇವತ್ತು ಮನೆಯಲ್ಲಿ ರೊಟ್ಟಿ, ಹೆಸರುಕಾಳು ಪಲ್ಯ ತಿಂದೆ. ಧನ್ಯವಾದಗಳು ಮೋದಿಜಿ ಎಂದು ಭರಮಪ್ಪ' ಎಂಬವರು ವ್ಯಂಗ್ಯವಾಡಿದ್ದು, 'ನಾನಿವತ್ತು ಮಧ್ಯಾಹ್ನ ಊಟ ಮಾಡಿದೆ. ಧನ್ಯವಾದಗಳು ಮೋದಿ' ಎಂದು ಶಿವು ಎಂಬವರು ಕಮೆಂಟ್ ಮಾಡಿದ್ದಾರೆ.

'ಇಂದು ನಾನು ನನ್ನ ಮೊಬೈಲ್ ಗೆ ರಿಚಾರ್ಜ್ ಮಾಡಿದೆ. ಇದರಿಂದಾಗಿ ಗೂಗಲ್ ಪೇನಲ್ಲಿ ನನಗೆ 5 ರೂ. ಕ್ಯಾಶ್ ಬ್ಯಾಕ್ ಸಿಕ್ಕಿತು', 'ಎರಡು ವಾರಗಳ ಹಿಂದೆ ನಮ್ಮ ನಾಯಿ 6 ಮರಿಗಳನ್ನು ಹಾಕಿವೆ. ಅದು ಈಗ ನರೇಂದ್ರ ಮೋದಿಗೆ ಧನ್ಯವಾದ ಹೇಳಲು ಕಾಯುತ್ತಿದೆ ಎಂದು' ಚೇತನ್ ಕೃಷ್ಣ ಎಂಬವರು ಬರೆದಿದ್ದಾರೆ.

ಕೆಲವು ವಾರಗಳಿಂದ ನನ್ನ ಕಾರು ಸಂಪೂರ್ಣವಾಗಿ ಧೂಳಿನಿಂದ ಆವೃತ್ತವಾಗಿತ್ತು. ಇಂದು ಮಳೆ ಬಂದು, ಕಾರು ಸಂಪೂರ್ಣವಾಗಿ ಸ್ವಚ್ಚವಾಯಿತು. ನನ್ನ ಕಾರಿನ ಮೇಲೆ ಮಳೆಯನ್ನು ಸುರಿಸಿದ್ದಾಕ್ಕಾಗಿ ಮೋದಿಗೆ ಪ್ರಾಮಾಣಿಕ ಧನ್ಯವಾದಗಳು ಎಂದು ಆದರ್ಶ್ ಕುಮಾರ್ ಎಂಬವರು ಟ್ವೀಟ್ ಮಾಡಿದ್ದಾರೆ.

ನೆರೆ ಮನೆಯವರು ನಮಗೆ ಬಿರಿಯಾನಿ ನೀಡಿದರು. ನಾನು ಅವರಿಗೆ ಧನ್ಯವಾದ ಹೇಳಿದೆ. ಆದರೆ ಇದಕ್ಕಾಗಿ ಮೋದಿಗೆ ಧನ್ಯವಾದ ಹೇಳಬೇಕೆಂದು ಅವರು ಹೇಳಿದರು. ನಮಗೆ ಬಿರಿಯಾನಿ ನೀಡಿದ ಮೋದಿಗೆ ಧನ್ಯವಾದಗಳು ಎಂದು ಚೀಕು ಎಂಬವರು ಕಮೆಂಟ್ ಮಾಡಿದ್ದಾರೆ.

ಬೆಳಗಿನ ಉಪಹಾರಕ್ಕೆ ಗೆಣಸು ಉಪ್ಕರಿ. ಪರಿಣಾಮ, ಏಕಪ್ರಕಾರವಾಗಿ ನಾದಮಯ ಅಧೋವಾಯು. ಅಬ್ಬಬ್ಬಾ! ಏನು ಸುವಾಸನೆ. ಧನ್ಯವಾದ ಮೋದಿಗೆ ಎಂದು ಧಿನಕರ್ ಶೆಟ್ಟಿ ಎಂಬವರು ವ್ಯಂಗ್ಯವಾಡಿದ್ದಾರೆ.

ಇಂದು ನಾನು ಉಪವಾಸ ಕೈಗೊಂಡಿದ್ದೇನೆ. ಹವಾಮಾನವು ಆಹ್ಲಾದಕರವಾಗಿದೆ. ತಂಪಾದ ಹವಾಮಾನ ಮತ್ತು ಕಡಿಮೆ ತಾಪಮಾನಕ್ಕಾಗಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದು ಅನೀಸ್ ಎಂಬವರು ಟ್ವೀಟ್ ಮಾಡಿದ್ದಾರೆ.

ನರೇಂದ್ರನಿಂದಾಗಿ ಸೂರ್ಯೋದಯವು ಇಂದು ಬೆಳಗ್ಗೆ 6:00 ಗಂಟೆಗೆ ಸಂಭವಿಸಿತು. ನರೇಂದ್ರನು ಉದ್ದನೆಯ ಕೋಲನ್ನು ಬಳಸಿ, ಎಚ್ಚರಗೊಳ್ಳಲು ಸೂರ್ಯನನ್ನು ಇರಿದಿದ್ದಾನೆ. ಸ್ವಲ್ಪ ಯೋಚಿಸಿ, ನರೇಂದ್ರ ಇಲ್ಲದಿದ್ದರೆ ಯಾರು ಸೂರ್ಯನನ್ನು ಎಚ್ಚರಗೊಳಿಸುತ್ತಿದ್ದರು? ಧನ್ಯವಾದಗಳು ನರೇಂದ್ರ ಎಂದು ಪ್ರಸಾದ್ ಎಂಬವರು ಬರೆದುಕೊಂಡಿದ್ದಾರೆ.

ನನ್ನ ರೀಚಾರ್ಜ್ ಗಾಗಿ ನಾನು ಹಣವನ್ನು ಪಾವತಿಸಿದ್ದೆ ಮತ್ತು ಅದು ಯಶಸ್ವಿಯಾಗಿದೆ. ಅವರ ಆಶೀರ್ವಾದ ಮತ್ತು ಪ್ರೀತಿ ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಗೌರವಾನ್ವಿತ ಪ್ರಧಾನಿ ಶ್ರೀ ಶ್ರೀ ನರೇಂದ್ರ ಮೋದಿಜಿ ಅವರಿಗೆ ಧನ್ಯವಾದ ಎಂದು ಅರ್ಶಲ್ ಎಂಬವರು ಕಮೆಂಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News