ಲಸಿಕೆ ತಯಾರಿಕೆಯಲ್ಲಿ ವಿಳಂಬವಾದರೆ ನಾವು ನೇಣು ಹಾಕಿಕೊಳ್ಳಬೇಕಾ?: ಡಿ.ವಿ.ಸದಾನಂದಗೌಡ

Update: 2021-05-13 18:05 GMT

ಬೆಂಗಳೂರು, ಮೇ 13: ಕರ್ನಾಟಕ ಹೈಕೋರ್ಟ್ ನಾಳೆಯೇ ಕೋವಿಡ್ ಲಸಿಕೆ ಪೂರೈಸಿ ಎಂದು ಹೇಳುತ್ತಿದೆ. ಆದರೆ, ಕಂಪೆನಿಗಳು ಅಗತ್ಯ ಪ್ರಮಾಣದಷ್ಟು ಲಸಿಕೆಯನ್ನು ತಯಾರು ಮಾಡದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪ್ರಶ್ನಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಲಸಿಕೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಸಾಂಕ್ರಾಮಿಕವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿಲ್ಲ ಎಂದು ಹೇಳಿದರು.

ಕೋವಿಡ್ ಲಸಿಕೆ ತಯಾರಿಕೆಗೆ ಕೆಲವು ರಾಷ್ಟ್ರಗಳಿಂದ ಕಚ್ಚಾ ಸಾಮಗ್ರಿ ಬರುವುದು ತಡವಾಗಿದ್ದರಿಂದ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ನಾಳೆಯೇ ಲಸಿಕೆ ಕೊಡಿ ಎಂದು ನ್ಯಾಯಪೀಠವು ಹೇಳಿದರೆ ಹೇಗೆ ಸಾಧ್ಯ? ಲಸಿಕೆಯೇ ತಯಾರಾಗದಿದ್ದರೆ ನಾವು ನೇಣು ಹಾಕಿಕೊಳ್ಳಲು ಆಗುತ್ತದಾ ಎಂದು ಖಾರವಾಗಿ ಪ್ರಶ್ನಿಸಿದರು.

ಆರಂಭದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಸಂದರ್ಭದಲ್ಲಿ ವಿರೋಧ ಪಕ್ಷಗಳ ಅಪ ಪ್ರಚಾರದಿಂದ ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಲಿಲ್ಲ. ಶೇ.52ರಷ್ಟು ಮಂದಿ ಮಾತ್ರ ಲಸಿಕೆ ತೆಗೆದುಕೊಂಡರು. ಇದರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊಡಲು ತೀರ್ಮಾನಿಸಲಾಯಿತು. ಆ ವೇಳೆಗೆ ಎರಡನೆ ಅಲೆ ಜೋರಾಯಿತು. ಆಗ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಬಂದರು. ಇದರಿಂದ ಲಸಿಕೆ ಕೊರತೆ ಆಯಿತು. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಹಿನ್ನಡೆ ಆಗಿದೆ. ಕೆಲವೇ ದಿನಗಳಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಾಗಲಿದೆ ಎಂದು ಹೇಳಿದರು.

ಆಮ್ಲಜನಕ ಪೂರೈಕೆ ವಿಚಾರದಲ್ಲಿ ನಮ್ಮಿಂದ ತಪ್ಪಾಗಿದೆ. ಇದರಿಂದಾಗಿ ಕೆಲವು ಕಡೆಗಳಲ್ಲಿ ಕೊರೋನ ರೋಗಿಗಳು ಮೃತಪಟ್ಟಿದ್ದಾರೆ. ಇದರಲ್ಲಿ ರಾಜಕಾರಣ ಮಾಡಬಾರದು. ರಾಜಕಾರಣದಲ್ಲೂ ಅಂತಃಕರಣ ಇದೆ ಎಂಬುದನ್ನು ತೋರಿಸಬೇಕಾಗಿದೆ ಎಂದು ತಿಳಿಸಿದರು. 

ಕೊರೋನ ಮೊದಲ ಅಲೆಯ ವೇಳೆಯಲ್ಲಿ ಆಮ್ಲಜನಕದ ಕೊರತೆ ಆಗಿರಲಿಲ್ಲ. ಎರಡನೇ ಅಲೆಯ ವೇಳೆ ಕೊರತೆ ಆಗಿದೆ ಎಂಬುದನ್ನು ಒಪ್ಪಿಕೊಂಡರು. ರಾಜ್ಯಕ್ಕೆ 1015 ಮೆಟ್ರಿಕ್ ಟನ್ ಆಮ್ಲಜನಕವನ್ನು ಕೇಂದ್ರ ಸರಕಾರ ನಿಗದಿ ಮಾಡಿದೆ. ಅದರಲ್ಲಿ 500 ಮೆಟ್ರಿಕ್ ಟನ್ ಕಂಟೈನರ್ ಇಂದೇ ರಾಜ್ಯಕ್ಕೆ ಬರಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News