ನಿಷೇಧಿತ ಚೀನೀ ಆ್ಯಪ್ ಸಂಸ್ಥೆಯ 'ಕೊಡುಗೆ'ಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ ತೇಜಸ್ವಿ ಸೂರ್ಯ

Update: 2021-05-14 07:17 GMT

ಬೆಂಗಳೂರು: ಇತ್ತೀಚೆಗೆ ಬಿಬಿಎಂಪಿ 'ಬೆಡ್ ಬ್ಲಾಕಿಂಗ್ ಹಗರಣ'ವನ್ನು ಬಯಲಿಗೆಳೆದು ನಂತರ ಮತೀಯ ಬಣ್ಣ ನೀಡುವ ಯತ್ನ ನಡೆಸಿ ವಿವಾದಕ್ಕೀಡಾಗಿರುವ ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ಇದೀಗ ಇನ್ನೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ಕಳೆದ ವರ್ಷ ಚೀನಾ ಜತೆಗೆ ಲಡಾಖ್ ಗಡಿಯಲ್ಲಿ ಉಂಟಾದ ಸಂಘರ್ಷಮಯ ಹಾಗೂ ಉದ್ವಿಗ್ನ ವಾತಾವರಣದ ನಂತರ  "ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯುಂಟು ಮಾಡುವ ಸಾಧ್ಯತೆಯಿದೆ" ಎಂದು ಹೇಳಿ ಭಾರತ ಸರಕಾರ ನವೆಂಬರ್ ತಿಂಗಳಿನಲ್ಲಿ ನಿಷೇಧಿಸಿದ್ದ ಹಲವು ಚೀನೀ ಆ್ಯಪ್‍ಗಳ ಪೈಕಿ  ಲಲಮೋವ್ ಇಂಡಿಯಾ ಕೂಡ ಒಂದಾಗಿದೆ. ಆದರೆ ಇದೇ ಸಂಸ್ಥೆಯ ಅಮೆರಿಕಾ ಘಟಕ ಲಲಮೋವ್ ಯುಎಸ್ ಅನ್ನು ಶ್ಲಾಘಿಸಿ ಸಂಸದ ಸೂರ್ಯ ಮೇ 12ರಂದು ಟ್ವೀಟ್ ಮಾಡಿದ್ದಾರೆ.

PHOTO: THEQUINT

ಲಲಮೋವ್ ಯುಎಸ್  ಬಿಬಿಎಂಪಿಗೆ ಕೋವಿಡ್ ನಿರ್ವಹಣೆಗೆ ಸಹಾಯವಾಗುವಂತಾಗಲು 25 ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ನೀಡಿದೆಯೆನ್ನಲಾಗಿದ್ದು ಇದಕ್ಕೆ ಕೃತಜ್ಞತೆ ಸೂಚಿಸಿ ತೇಜಸ್ವಿ ಸೂರ್ಯ  ಟ್ವೀಟ್ ಮಾಡಿದ್ದಾರಲ್ಲದೆ ತಮ್ಮ ಟ್ವೀಟ್‍ನಲ್ಲಿ ಲಲಮೋವ್ ಗ್ಲೋಬಲ್ ಸಿಇಒ ಪೌಲ್ ಲೂ ಅವರಿಗೂ ಧನ್ಯವಾದ ತಿಳಿಸಿದ್ದಾರೆ. ತಮ್ಮ ಟ್ವೀಟ್‍ನಲ್ಲಿ  ಸೂರ್ಯ ಅವರು ಲಲಮೋವ್ ಇಂಡಿಯಾದ  ಸರಕಾರಿ ಮತ್ತು ಕೈಗಾರಿಕಾ ಸಂಪರ್ಕ ಅಧಿಕಾರಿ ಅಕ್ಷ್ಯ ಗುಪ್ತಾ ಅವರನ್ನೂ ಟ್ಯಾಗ್ ಮಾಡಿದ್ದಾರೆ.

ಆದರೆ ಭಾರತ ಸರಕಾರ ಹೇರಿದ ನಿಷೇಧದ ನಂತರ ಲಲಮೋವ್ ವೆಬ್ ಸೈಟ್‍ಗಳು ಭಾರತದಲ್ಲಿ ಲಭ್ಯವಿಲ್ಲ. ಹಾಗಾದರೆ ಹಾಂಕಾಂಗ್‍ನಲ್ಲಿ ಮುಖ್ಯ ಕಾರ್ಯಾಲಯ ಹೊಂದಿರುವ  ಹಾಗೂ ಬೆಂಗಳೂರಿನಲ್ಲಿ ಒಂದು ಕಚೇರಿ ಹೊಂದಿರುವ ಈ ಕಂಪೆನಿ ತೇಜಸ್ವಿ ಸೂರ್ಯ ಅವರ ಮುಖಾಂತರ ಭಾರತ ಸರಕಾರದ ಜತೆ ತನ್ನ ಸಂಬಂಧ  ಪುನಃಸ್ಥಾಪಿಸಲು ಯತ್ನಿಸುತ್ತಿದೆಯೇ ಎಂಬ ಪ್ರಶ್ನೆಯಿದ್ದರೂ  ಸಂಸದರಿಂದ ಇನ್ನೂ  ತಮ್ಮ ಟ್ವೀಟ್ ಸಂಬಂಧ ಯಾವುದೇ ಹೇಳಿಕೆ ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News