ಕೋವಿಡ್ ಆಸ್ಪತ್ರೆಯಲ್ಲಿ ಮೃತರ ಸಂಖ್ಯೆ 24 ಅಲ್ಲ 37: ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಯಿಂದ ಹೈಕೋರ್ಟ್ ಗೆ ವರದಿ
ಬೆಂಗಳೂರು, ಮೇ 14: ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೇ 2ರ ರಾತ್ರಿ ಸಂಭವಿಸಿದ 24 ಕೊರೋನ ರೋಗಿಗಳ ಸಾವಿಗೆ ಆಕ್ಸಿಜನ್ ಕೊರತೆಯೇ ಕಾರಣವಾಗಿದೆ ಎಂದು ಹೈಕೋಟ್೯ ಗೆ ನಿವೃತ್ತ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ನೇತೃತ್ವದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಸ್ಪಷ್ಟಪಡಿಸಿದೆ.
ಬೆಂಗಳೂರಿನ ಹೈಕೋರ್ಟ್ ಪ್ರಧಾನ ಪೀಠದ ನಿರ್ದೇಶನದಂತೆ ತನಿಖೆ ನಡೆಸಿರುವ ಕಾನೂನು ಸೇವಾ ಪ್ರಾಧಿಕಾರದ ಸಮಿತಿಯು 31 ಪುಟಗಳ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸಲ್ಲಿಸಿದೆ.
ಮೇ 2ರ ರಾತ್ರಿ 10.30ರಿಂದ ಮೇ 3ರ ಬೆಳಗಿನ ಜಾವ 2.30ರವರೆಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿತ್ತು. ಇದರಿಂದಾಗಿ ಆಕ್ಸಿಜನ್ ಪಡೆಯುತ್ತಿದ್ದ ಅನೇಕ ರೋಗಿಗಳಿಗೆ ತೊಂದರೆಯಾಗಿದ್ದು, ಈ ಸಮಯದಲ್ಲಿ ಹಲವರು ಸಾವನ್ನಪ್ಪಿದ್ದಾರೆ. ಮತ್ತೆ ಕೆಲವರಿಗೆ ದೇಹದ ಅಂಗಾಗಳಿಗೆ ಹಾನಿಯಾಗಿದ್ದು, ಬಳಿಕ ಕೆಲ ಹೊತ್ತಿನಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
37 ಮಂದಿ ಸಾವು: ಮೇ 3ರ ರಾತ್ರಿ 2.30ರ ಬಳಿಕ ಆಕ್ಸಿಜನ್ ಪೂರೈಕೆಯಾಗಿದೆ. ಆ ಬಳಿಕವೂ ಹಲವರು ಮೃತಪಟ್ಟಿದ್ದಾರೆ. ಒಟ್ಟಾರೆ ಮೇ 2ರ ರಾತ್ರಿ 10.30ರಿಂದ ಮೇ 3ರ ಸಂಜೆಯವರೆಗೆ ಆಸ್ಪತ್ರೆಯಲ್ಲಿ 37 ಸಾವು ದಾಖಲಾಗಿವೆ.
24 ಜನರ ಸಾವಿಗೆ ಸಂಬಂಧಿಸಿದಂತೆ ಜಿಲ್ಲಾ ಸರ್ಜನ್ ನೇತೃತ್ವದ ಸಮಿತಿ ನಡೆಸಿರುವ ಡೆತ್ ಆಡಿಟ್ ನಲ್ಲಿ ಕೇವಲ 3 ಕೊರೋನ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದು, 7 ರೋಗಿಗಳು ಹೈಪೋಕ್ಸಿಕ್ ಬ್ರೇನ್ ಇಂಜ್ಯುರಿ ಕಾರಣದಿಂದ ಸಾವನ್ನಪ್ಪಿದ್ದಾರೆ. ಉಳಿದ 14 ಮಂದಿ ಕೊರೋನ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿದೆ. ಉಳಿದ 13 ಕೊರೋನ ಸೋಂಕಿತರ ಸಾವಿನ ಬಗ್ಗೆ ಯಾವುದೇ ಮಾಹಿತಿ ಡೆತ್ ಆಡಿಟ್ ನಲ್ಲಿ ಲಭ್ಯವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಕೋವಿಡ್ ಆಸ್ಪತ್ರೆಗೆ ಮೇ 3ರ ಬೆಳಗಿನ ಜಾವ 2 ಗಂಟೆ ಬಳಿಕ ಆಕ್ಸಿಜನ್ ಪೂರೈಕೆಯಾಗಿದ್ದು, ಆ ಬಳಿಕ ಸಂಭವಿಸಿರುವ ಸಾವುಗಳಿಗೆ ಆಕ್ಸಿಜನ್ ಕೊರತೆ ಕಾರಣವಲ್ಲ ಎಂದು ಹೇಳಲಾಗಿದೆ. ಮಿದುಳಿಗೆ ಪೂರೈಕೆಯಾಗುವ ಆಕ್ಸಿಜನ್ ನಲ್ಲಿ ಅಭಾವ ಉಂಟಾದಾಗಲೇ ಮಿದುಳಿಗೆ ಹಾನಿ ಸಂಭವಿಸುತ್ತದೆ. ಆಕ್ಸಿಜನ್ ಪೂರೈಕೆ ನಿಂತ ತಕ್ಷಣದ 5 ನಿಮಿಷಗಳಲ್ಲಿ ಸಾವು ಸಂಭವಿಸುತ್ತದೆ. ಹೀಗಾಗಿ, ಹೈಪೋಕ್ಸಿಕ್ ಬ್ರೇನ್ ಇಂಜ್ಯುರಿ ಎಂಬ 7 ಮಂದಿ ಜನರ ಸಾವಿಗೂ ಆಮ್ಲಜನಕ ಕೊರತೆಯೇ ಕಾರಣವಾಗಿದೆ.
ಇನ್ನು 14 ಮಂದಿ ಕೊರೋನ ಚಿಕಿತ್ಸೆಗಾಗಿ ಒಳ ರೋಗಿಗಳಾಗಿ ದಾಖಲಾಗಿದ್ದವರಿಗೆ ಆಕ್ಸಿಜನ್ ಅಗತ್ಯವಿದ್ದ ಸಂದರ್ಭದಲ್ಲಿ ಪೂರೈಕೆ ಸ್ಥಗಿತಗೊಂಡಿರುವುದೇ ಅವರ ಸಾವಿಗೆ ಕಾರಣ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಸಮಿತಿ ಸ್ಪಷ್ಟಪಡಿಸಿದೆ.
ಈ ಕುರಿತಂತೆ ಸಮಿತಿಯ ವರದಿ ಪರಿಶೀಲಿಸಿದ ವಿಭಾಗೀಯ ನ್ಯಾಯಪೀಠ, ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಸಾವುಗಳು ಸಂಭವಿಸಿವೆ. ಹೀಗಾಗಿ, ತಪ್ಪಿತಸ್ಥರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡುವಂತೆ ಸರಕಾರಕ್ಕೆ ಸೂಚಿಸಿದೆ. ಜತಗೆ ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸುವ ಸರಕಾರದ ನಿಲುವು ತಿಳಿಸಬೇಕೆಂದು ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.
ಮೇ 2ರಂದು 37 ಜನ ಒಳ ರೋಗಿಗಳಾಗಿ ದಾಖಲಾಗಿದ್ದರು ಎಂಬುದು ಆಸ್ಪತ್ರೆಯ ದಾಖಲೆಗಳಿಂದ ತಿಳಿದು ಬಂದಿದೆ. ಹೀಗಾಗಿ, ಆ 37 ಮಂದಿ ಒಳರೋಗಿಗಳ ಸಾವು ಆಕ್ಸಿಜನ್ ಕೊರತೆಯಿಂದಲೇ ಆಗಿರುವ ಸಾಧ್ಯತೆ ಇದೆ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
ಸಂಪನ್ಮೂಲ ಸಂಗ್ರಹಿಸುವಲ್ಲಿ ಡಿಸಿ ವಿಫಲ: ಚಾಮರಾಜನಗರಕ್ಕೆ ಮೈಸೂರಿನಿಂದ ಆಮ್ಲಜನಕ ಪೂರೈಕೆ ಮಾಡುವಲ್ಲಿ ಅಲ್ಲಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಡೆಯೊಡ್ಡಿರುವುದಾಗಿ ಆರೋಪ ಮಾಡಿದ್ದ ಡಿಸಿ ಡಾ.ಎಂ.ಆರ್.ರವಿ ಈ ಪ್ರಕರಣದಲ್ಲಿ ತೋರಿದ ಕರ್ತವ್ಯ ಪಾಲನೆಯ ವಿಫಲತೆಯ ಬಗ್ಗೆ ವರದಿ ತಿಳಿಸಿದೆ. ಮೆಡಿಕಲ್ ಡೀನ್ ಡಾ.ಸಂಜೀವ್ ನಾಯಕತ್ವದ ಗುಣವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.
ಕೇಸ್ ಶೀಟ್ ಸರಿಯಾಗಿ ಇಲ್ಲ: ಸೋಂಕಿತರ ಸಾವಿಗೆ ಸಂಬಂಧಿಸಿದ ಕೇಸ್ ಶೀಟ್ ಗಳ ನಿರ್ವಹಣೆ ಸಮಾಧಾನಕರವಾಗಿಲ್ಲ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ.