ನ್ಯಾಯಾಧೀಶರ ವಿರುದ್ಧವೇ ಮಾತಾಡುತ್ತಿದ್ದಾರೆ, ವಿನಾಶ ಕಾಲೇ ವಿಪರೀತ ಬುದ್ಧಿ: ಡಿ.ಕೆ.ಶಿವಕುಮಾರ್

Update: 2021-05-14 12:09 GMT

ಬೆಂಗಳೂರು, ಮೇ 14: `ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರೇ ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ, 25 ಸಂಸದರು ಬಿಜೆಪಿ, ನಕಲಿ ಸರ್ವಶಕ್ತ ಮೋದಿಯವರೂ ಬಿಜೆಪಿ!! ಹೀಗಿದ್ದೂ ನೀವೇ ಹೀಗೆ ಹೇಳುತ್ತೀರಲ್ಲ ಸ್ವಾಮಿ ಜನತೆ ನೇಣು ಹಾಕಿಕೊಳ್ಳಬೇಕೆ? ನಿಮ್ಮಿಂದಾಗದು ಎಂದು ತಿಳಿದಿದೆ, ಕಾಂಗ್ರೆಸ್ ಜನತೆಯ ಜೊತೆಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, `ನೇಣು ಹಾಕ್ಕೋಬೇಕಾ? ನ್ಯಾಯಾದೀಶರೇನು ಸರ್ವಜ್ಞರೇ?' ಎಂದು ತಮ್ಮ ಅಯೋಗ್ಯತನ ಮರೆಮಾಚಲು ಎಷ್ಟೆಲ್ಲ ಹರಸಾಹಸಪಡುತ್ತಿದ್ದಾರೆ ಬಿಜೆಪಿಗರು. ಜನರ ಪರವಾಗಿ ಮಾತನಾಡುತ್ತಿದ್ದ ವಿರೋಧ ಪಕ್ಷದ ನಾಯಕರ ಬಗ್ಗೆ ಮುಗಿಬೀಳುತ್ತಿದ್ದವರು ಈಗ ನ್ಯಾಯಾಧೀಶರ ವಿರುದ್ಧವೇ ಮಾತಾಡುತ್ತಿದ್ದಾರೆ. ವಿನಾಶ ಕಾಲೇ ವಿಪರೀತ ಬುದ್ಧಿ!' ಎಂದು ವ್ಯಂಗ್ಯವಾಡಿದ್ದಾರೆ.

`ಕುಣಿಲಾರದವನು ನೆಲನೇ ಡೊಂಕು ಎಂದಂತೆ ಜನಪರ ಚಿಂತನೆ ಇಲ್ಲದ ಅಸಮರ್ಥ ಬಿಜೆಪಿ ಸರಕಾರಕ್ಕೆ ಪ್ರತಿಯೊಂದು ವಿಷಯದಲ್ಲೂ ಹೈಕೋರ್ಟ್ ಮಾನಿಟರ್ ಮಾಡಬೇಕಾದ ಸ್ಥಿತಿ ಬಂದಿದ್ದು ದುರ್ದೈವ. ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸುತ್ತಿದೆ, ರಾಜ್ಯದಲ್ಲಿ ಹೈಕೋರ್ಟ್ ಚಾಟಿ ಬೀಸುತ್ತಿದೆ. ಕೊರೋನ ಹೊತ್ತಲ್ಲಿ ಬಿಜೆಪಿಯ ನೀಚತನ ಅನಾವರಣಗೊಳ್ಳುತ್ತಿದೆ' ಎಂದು ಶಿವಕುಮಾರ್ ಟೀಕಿಸಿದ್ದಾರೆ.

ಲಸಿಕೆ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ ಸರಕಾರದ ಗೊಂದಲ, ಪ್ರಮಾದ ಜನರ ಜೀವ ಅಪಾಯಕ್ಕೆ ಸಿಲುಕಿಸಿದೆ. ಪ್ರಾಮಾಣಿಕ ಕೆಲಸ ಮಾಡಲು ಸರಕಾರಕ್ಕೆ ಹೈಕೋರ್ಟ್ ಸೂಚನೆ, ಕೇಂದ್ರದ ಎಚ್ಚರಿಕೆಗಳ ನಿರ್ಲಕ್ಷ್ಯ, 2ನೆ ಲಸಿಕೆ ಸುಳ್ಳು ಅಂಕಿ ಅಂಶ, ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನಿರ್ಲಕ್ಷ್ಯ, ಬಿಜೆಪಿ ಅಧಿಕಾರದಲ್ಲಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದೆ' ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಂಕಿತರ ಸಂಖ್ಯೆ ದಿನೆ-ದಿನೆ ಹೆಚ್ಚಾಗುತ್ತಿದೆ. ಅಗತ್ಯಕ್ಕೆ ಅನುಸಾರ ಆಕ್ಸಿಜನ್ ಪೂರೈಕೆ ಆಗುತ್ತಿಲ್ಲ. ನಿರಂತರವಾಗಿ ಆಕ್ಸಿಜನ್ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೇ ದೇಶದ ಪ್ರತಿ ನಾಗರಿಕರಿಗೂ ಕೋವಿಡ್-19 ಲಸಿಕೆಯನ್ನು ಹಾಕಬೇಕು ಎಂದು ಒತ್ತಾಯ ಮಾಡುತ್ತೇನೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಉಚಿತ ಲಸಿಕೆಗಾಗಿ 100 ಕೋಟಿ ದೇಣಿಗೆ

ನೂರು ಕೋಟಿ ರೂ. ಕೋವಿಡ್ ಲಸಿಕೆ ಯೋಜನೆ! ಇದು ಕಾಂಗ್ರೆಸ್ ಕಾರ್ಯ! 18-44ರ ವಯೋಮಾನದವರಿಗೆ ಉಚಿತ ಲಸಿಕೆ ನೀಡಲು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 100 ಕೋಟಿ ರೂ.ದೇಣಿಗೆ ಸಂಗ್ರಹಿಸಿರುವ ಕಾಂಗ್ರೆಸ್, ಪಕ್ಷದ ಎಲ್ಲ ಶಾಸಕರು, ಸಂಸದರಿಗೆ ಅಭಿನಂದನೆಗಳು. ಇನ್ನಾದರೂ ಬಿಜೆಪಿ ಸರಕಾರ ನಿದ್ರಾವಸ್ಥೆಯಿಂದ ಹೊರಬರುವುದೇ?'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News