''ನಿಮ್ಮ ಪಾಪದ ಸಂಪಾದನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ರಾಜ್ಯದ ಜನತೆಗಿಲ್ಲ''

Update: 2021-05-14 13:08 GMT

ಬೆಂಗಳೂರು, ಮೇ 14: ಕೊರೋನ ಲಸಿಕೆ ಹಂಚಿಕೆ ಪ್ರಕ್ರಿಯೆಗೆ 100 ಕೋಟಿ ರೂ. ಹಣವನ್ನು ನೀಡಲಾಗುವುದು ಇಂದು ರಾಜ್ಯ ಕಾಂಗ್ರೆಸ್ ಘೋಷಿಸಿತ್ತು. ಆದರೆ ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿಯು 'ನಿಮ್ಮ ಪಾಪದ ಸಂಪಾದನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ರಾಜ್ಯದ ಜನತೆಗೆ ಬಂದಿಲ್ಲ' ಎಂದು ಟೀಕಿಸಿದೆ.

''ನಮ್ಮ ಪಕ್ಷದ ಎಲ್ಲಾ ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ತಲಾ ರೂ.1 ಕೋಟಿಯಂತೆ ಒಟ್ಟು ರೂ. 100 ಕೋಟಿ ಹಣವನ್ನು ವ್ಯಾಕ್ಸಿನ್ ಹಂಚಿಕೆ ಪ್ರಕ್ರಿಯೆಗೆ ನೀಡಲು ತೀರ್ಮಾನಿಸಿದ್ದೇವೆ. ಎಲ್ಲರಿಗೂ ಆದಷ್ಟು ಬೇಗ ವ್ಯಾಕ್ಸಿನ್ ಸಿಗಲಿ ಎಂಬುದು ನಮ್ಮ ಆಶಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ಇದಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಬಿಜೆಪಿ, ಉಚಿತ ಲಸಿಕೆ ಕೊಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಹೇಳಲಿ, ನಾವು ಸಹಾಯ ಮಾಡುತ್ತೇವೆ ಎಂದಿರುವ ಡಿ.ಕೆ ಶಿವಕುಮಾರ್ ಅವರೇ, ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದಷ್ಟು ಸುಲಭವಾಗಿ ಸಹಾಯ ಮಾಡಲು ಸಾಧ್ಯವಿಲ್ಲ. ಅಷ್ಟಕ್ಕೂ ನಿಮ್ಮ ಪಾಪದ ಸಂಪಾದನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ರಾಜ್ಯದ ಜನತೆಗೆ ಬಂದಿಲ್ಲ ಎಂದು ತಿಳಿಸಿದೆ.

ಮಾನ್ಯ ಡಿ.ಕೆ.ಶಿವಕುಮಾರ್ ಅವರೇ ಉಚಿತ ಲಸಿಕೆ‌ ನೀಡಲು ನಿಮ್ಮ‌ ಅಧಿನಾಯಕಿ ಸೋನಿಯಾ ಗಾಂಧಿ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಯೋಜನೆ ರೂಪಿಸಿದ್ದೀರಾ? ಜಗತ್ತಿನ ನಾಲ್ಕನೇ ಶ್ರೀಮಂತ ಮಹಿಳೆ ಇದುವರೆಗೆ ಕೋವಿಡ್ ಸಹಾಯ ಹಸ್ತ ಚಾಚಿಲ್ಲವೇಕೆ? ದೆಹಲಿಯಿಂದ ಗೋವಾಕ್ಕೆ ಬಂದದ್ದಾಯಿತು, ಗೋವಾದಿಂದ ಇಟಲಿಗೋ? ಎಂದು ಬಿಜೆಪಿ ಪ್ರಶ್ನಿಸಿದೆ.

''ಸಂಕಷ್ಟದ ಸಮಯದಲ್ಲಿ ಬಿಟ್ಟಿ ಸಲಹೆ ನೀಡುವುದು, ಜನರ ದಾರಿ ತಪ್ಪಿಸುವುದು. ಇದು ಕಾಂಗ್ರೆಸ್ ಪಕ್ಷ ದೇಶದ ಜನರಿಗೆ ಮಾಡುತ್ತಿರುವ ದ್ರೋಹ. ಭ್ರಷ್ಟಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ, ನಿಮಗೆ ನಿಜಕ್ಕೂ ಸಹಾಯ ಮಾಡುವ ಮನಸಿದ್ದರೆ ಒಂದಿಷ್ಟು ಸುಮ್ಮನಿದ್ದು ಬಿಡಿ. ಪೊಳ್ಳು ಆರೋಪ ಮಾಡುವುದು ಬಿಟ್ಟು ಸುಮ್ಮನಿರುವಿರಾ? ಸರ್ಕಾರಕ್ಕೆ ಸವಾಲೆಸೆಯುವ ಡಿ.ಕೆ. ಶಿವಕುಮಾರ್ ಅವರೇ, ರಾಜೀವ್ ಗಾಂಧಿ ಫೌಂಡೇಶನ್ ಖಾತೆಯಲ್ಲಿ ಲಕ್ಷಾಂತರ ಕೋಟಿ ಹಣ ಕೊಳೆಯುತ್ತಿದೆ. ನಿಮ್ಮ ಆದಾಯಕ್ಕೆ ಮೀರಿದ ಆಸ್ತಿಯ ತನಿಖೆ ನಡೆಯುತ್ತಿದೆ. ಇದ್ಯಾವುದೂ ನ್ಯಾಯ ಮಾರ್ಗದ ಗಳಿಕೆಯಲ್ಲ. ಸಹಾಯದ ಹೆಸರಿನಲ್ಲೂ ಕಪ್ಪು ಬಿಳುಪು ದಂಧೆಗೆ ಇಳಿದಿದ್ದೀರಾ?'' ಎಂದು ಟೀಕಿಸಿದೆ.

ಉಚಿತ ಲಸಿಕೆಗೆ ನಾವು ಸಹಾಯ ಮಾಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದಾಗಲೇ, ಅತ್ತೆಯ ದುಡ್ಡನ್ನು ಅಳಿಯನಿಗೆ ದಾನ ಮಾಡುವ ಚಿಲ್ಲರೆ ಯೋಜನೆ ರೂಪಿಸುತ್ತಿರಬಹುದೆಂಬ ಶಂಕೆಯಿತ್ತು. ಈಗ 100 ಕೋಟಿ ನೀಡುವ ಘೋಷಣೆ ಮಾಡಿದ್ದಾರೆ. ಇದು ಜನರ ದಾರಿ ತಪ್ಪಿಸುವ ಕಾಂಗ್ರೆಸ್ ಪಕ್ಷದ ಮತ್ತೊಂದು ಯೋಜನೆ ಅಷ್ಟೇ! ಕೆಪಿಸಿಸಿ ಕಚೇರಿ ಕಟ್ಟುವುದಕ್ಕೆ ಪಕ್ಷದ ಶಾಸಕರಿಂದ ಜಿಲ್ಲಾಧ್ಯಕ್ಷರವರೆಗೆ ಚಂದಾ ಎತ್ತಲಾಗಿತ್ತು. ನೆಹರು ಪ್ರತಿಮೆ, ಇಂದಿರಾ ಪುತ್ಥಳಿ, ರಾಜೀವ್ ಶಿಲಾಫಲಕ, ಹತ್ತಾರು ಸಮಾಧಿಗೆ ವ್ಯಯಿಸಿದ ಹಣವನ್ನು ಹಣವನ್ನು ಕೋವಿಡ್ ನಿರ್ವಹಣೆಗೆ ದಾನ ಮಾಡಬಹುದಿತ್ತಲ್ಲವೇ? ನೂತನ ಸಂಸತ್ ಭವನದ ಮೇಲೇಕೆ ಕಣ್ಣು? #ಜನವಿರೋಧಿಕಾಂಗ್ರೆಸ್ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News