ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದಿಂದ ರೈತರಿಗೆ 985 ಕೋಟಿ ರೂ. ಬಿಡುಗಡೆ: ಯಡಿಯೂರಪ್ಪ

Update: 2021-05-14 14:16 GMT

ಬೆಂಗಳೂರು, ಮೇ 14: `ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ'ಯಡಿ ರಾಜ್ಯದ 55.36 ಲಕ್ಷ ಮಂದಿ ರೈತರ ಖಾತೆಗಳಿಗೆ ಪ್ರಸಕ್ತ ವರ್ಷದ ಮೊದಲ ಕಂತು ಒಟ್ಟು 985.61 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಪ್ರಧಾನಿ ಮೋದಿಯವರೊಂದಿಗಿನ ವರ್ಚುವೆಲ್ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಯಡಿಯೂರಪ್ಪ, `ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯಡಿ ಎಪ್ರಿಲ್‍ನಿಂದ ಜುಲೈ ತ್ರೈಮಾಸಿಕದ ಸೌಲಭ್ಯವನ್ನು ಬಿಡುಗಡೆ ಮಾಡಿದ್ದಾರೆ' ಎಂದು ಮಾಹಿತಿ ನೀಡಿದರು.

ಈ ಯೋಜನೆ ಜೊತೆಗೆ ರಾಜ್ಯ ಸರಕಾರ ಹೆಚ್ಚುವರಿಯಾಗಿ ಎರಡು ಕಂತುಗಳಲ್ಲಿ ಫಲಾನುಭವಿ ರೈತರಿಗೆ ವಾರ್ಷಿಕ 4 ಸಾವಿರ ರೂ.ಸಹಾಯಧನ ನೀಡುತ್ತಿದೆ. ಈವರೆಗೂ ರಾಜ್ಯದ ರೈತರಿಗೆ ಕೇಂದ್ರ ಸರಕಾರ ಒಟ್ಟು 6,936.98 ಕೋಟಿ ರೂ. ಹಾಗೂ ರಾಜ್ಯ ಸರಕಾರ 2,891.70 ಕೋಟಿ ರೂ.ಗಳನ್ನು ಪಾವತಿಸಿದೆ. ಈ ಯೋಜನೆ ಅತಿ ಹೆಚ್ಚು ಶೇಕಡಾವಾರು ಆಧಾರ್ ಆಧಾರಿತ ವಹಿವಾಟುಗಳ ಅತ್ಯುತ್ತಮ ನಿರ್ವಹಣೆಗೆ 2021ರ ಫೆಬ್ರವರಿಯಲ್ಲಿ ಕೇಂದ್ರದಿಂದ ಕರ್ನಾಟಕ ರಾಜ್ಯಕ್ಕೆ ಪ್ರಶಸ್ತಿ ಬಂದಿದೆ ಎಂದು ಯಡಿಯೂರಪ್ಪ ನೆನಪು ಮಾಡಿಕೊಂಡರು.

ಉದ್ದೇಶಿತ ಯೋಜನೆ ನಿರಂತರ ಮೇಲ್ವಿಚಾರಣೆಯ ಭಾಗವಾಗಿ ಯೋಜನೆಯ ಫಲಾನುಭವಿಗಳಾಗಿರುವ ರೈತ ಕುಟುಂಬಗಳ ಅರ್ಹತೆಯನ್ನು ಪರಿಶೀಲಿಸಲಾಗುತ್ತದೆ. 2019-20ರಿಂದ 2022ರ ವರೆಗೆ ಒಟ್ಟು ಕೇಂದ್ರ ಸರಕಾರ 6,936 ಕೋಟಿ ರೂ. ಹಾಗೂ ರಾಜ್ಯ ಸರಕಾರ 2,891 ಕೋಟಿ ರೂ.ಗಳನ್ನು ಹಣವನ್ನು ಈ ಯೋಜನೆಗೆ ಒದಗಿಸಿವೆ' ಎಂದು ಯಡಿಯೂರಪ್ಪ ವಿವರಿಸಿದರು.

ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಪಿ.ಸಿ. ಮೋಹನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News