ಚಾಮರಾಜನಗರ ದುರಂತ: ಮೈಸೂರಿಗೆ ಕಳಂಕ ತರುವ ಕೆಲಸ ಮಾಡಿದವರು ಕ್ಷಮೆ ಕೇಳಬೇಕೆಂದ ಡಿಸಿ ರೋಹಿಣಿ ಸಿಂಧೂರಿ

Update: 2021-05-14 16:37 GMT

ಮೈಸೂರು,ಮೇ.14: ಚಾಮರಾಜನಗರ ಘಟನೆಗೆ ಸಂಬಂಧಿಸಿದಂತೆ ಕಳಂಕ ತರುವ ಕೆಲಸ ಮಾಡಿದವರೆಲ್ಲ ಮೈಸೂರಿನ ಜನತೆಯ ಕ್ಷಮೆ ಯಾಚಿಸಬೇಕೆಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

ಬಸವ ಜಯಂತಿ ಅಂಗವಾಗಿ ಶುಕ್ರವಾರ ನಗರದ ಗನ್‍ಹೌಸ್ ವೃತ್ತದಲ್ಲಿರುವ ಶ್ರೀಬಸವೇಶ್ವರರ ಪುತ್ಥಳಿಗೆ ಜಿಲ್ಲಾಡಳಿತದ ವತಿಯಿಂದ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಚಾಮರಾಜನಗರ ಘಟನೆಗೆ ಸಂಬಂಧಿಸಿದಂತೆ ತ್ರಿಸದಸ್ಯ ಪೀಠ ವರದಿ ಸಲ್ಲಿಸಿದೆ. ನಾನು ಮೈಸೂರಿಗೆ ಬಂದ ದಿನದಿಂದ ಕೆಲವೊಬ್ಬರು ಇಲ್ಲ ಸಲ್ಲದ ಆರೋಪ ಮಾಡುತ್ತಲೇ ಬಂದಿದ್ದಾರೆ. ನಾವು ಯಾವುದಕ್ಕೂ ಪ್ರತಿಕ್ರಿಯಿಸಲು ಹೋಗಿಲ್ಲ, ಯಾಕೆಂದರೆ ಅದು ನಮ್ಮ ಕೆಲಸವಲ್ಲ. ಆದರೆ ಈ ವಿಷಯದಲ್ಲಿ ನಮ್ಮ ಮೇಲೆ ಆರೋಪ ಮಾಡಲು ಹೋಗಿ ಇಡೀ ಮೈಸೂರು ಜಿಲ್ಲೆ, ಮೈಸೂರು ಜನತೆಗೆ ಕಳಂಕ ತರುವ ಪ್ರಯತ್ನ ನಡೆದಿದೆ. ನಾವು ಮೈಸೂರು ಜಿಲ್ಲೆಯವರು ಈ ಕಳಂಕದಿಂದ ಹೊರ ಬರಬೇಕು, ಯಾರು ಯಾರು ಈ ಕಳಂಕ ಮಾಡಿದ್ದಾರೆ ಅವರೆಲ್ಲರೂ ಮೈಸೂರು ಜನತೆಯ ಕ್ಷಮೆಯಾಚಿಸಬೇಕೆಂದು ಕೇಳಿಕೊಳ್ಳುವುದಾಗಿ ತಿಳಿಸಿದರು.

ನಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳು ಆಧಾರರಹಿತವಾಗಿವೆ. ನಮ್ಮ ವಿರುದ್ಧ ಆರೋಪ ಮಾಡುವವರಿಗೆ ನಾವು ಯಾವತ್ತೂ ಸ್ಪಂದಿಸಿಲ್ಲ. ಸರ್ಕಾರ ಕೇಳಿದ ವರದಿಯಲ್ಲಿ ನಾವೆಲ್ಲ ಕೊಡುತ್ತೇವೆ. ಚಾಮರಾಜನಗರ ಘಟನೆಯಲ್ಲೂ ಅದನ್ನೇ ಹೇಳಿದ್ದೇವೆ. ನಮ್ಮ ಜವಾಬ್ದಾರಿ ಅರಿತು ನಾವು ಕೆಲಸ ಮಾಡುತ್ತಿದ್ದೇವೆ. ನಾವು ಸರ್ವೀಸ್ ಗೆ ಸೇರಿದ್ದೇ ದೇಶ ಸೇವೆ ಮಾಡೋದಿಕ್ಕೆ, ಸಣ್ಣಪುಟ್ಟ ಆರೋಪಗಳಿಗೆ ಯಾವುದಕ್ಕೂ ಉತ್ತರ ನೀಡಿಲ್ಲ. ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತ ಬಂದಿದೆ. ಜನರ ಜೀವ ಮುಡುಪಾಗಿಡುವ ಈ ಸಂದರ್ಭದಲ್ಲಿಯೂ ಕಳಂಕದ ರೀತಿಯಲ್ಲಿ ಮಾತನಾಡಿದ್ದಾರೆ. ಅವರೆಲ್ಲ ಮೈಸೂರು ಜಿಲ್ಲೆಯ ಜನರಲ್ಲಿ ಕ್ಷಮೆ ಕೇಳಬೇಕು. ಮಾಧ್ಯಮದವರ ಬಳಿಯೂ ಕೇಳಿಕೊಳ್ಳುವುದೇನೆಂದರೆ ಸಣ್ಣ ಸಣ್ಣ ವಿಷಯಗಳೆಲ್ಲವನ್ನೂ ನಮ್ಮನ್ನು ಕೇಳುವುದು ಸರಿಯಲ್ಲ. ಶಾಸಕ, ಮಾಜಿ ಕಾರ್ಪೋರೇಟರ್ ಏನೋ ಒಂದು ಮಾತನಾಡುತ್ತಾ ಇರುತ್ತಾರೆ. ಅದಕ್ಕೆಲ್ಲ ಉತ್ತರ ನೀಡುತ್ತಾ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದರು.

ಕಠಿಣ ಪರಿಸ್ಥಿತಿ ಇದೆ. ಕೈಜೋಡಿಸಿ ಕೆಲಸ ಮಾಡಿದರೆ ಜೀವ ಉಳಿಸಲು ಸಾಧ್ಯವಾಗಲಿದೆ. ಇಂದು ಬಸವ ಜಯಂತಿ. ಬಸವಣ್ಣನವರ ವಚನ ಕಳಬೇಡ ಕೊಲಬೇಡ, ಹುಸಿಯನುಡಿಯಲು ಬೇಡ. ಇದನ್ನು ಎಲ್ಲರೂ ಮಾರ್ಗಸೂಚಿಯಾಗಿ ಅರಿತು ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ನಡೆಯಬೇಕು. ಚಾಮುಂಡಿ ತಾಯಿ ಎಲ್ಲರಿಗೂ ಬಂದಿರುವ ಸಂಕಷ್ಟವನ್ನು ಪರಿಹರಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ರೋಹಿಣಿ ಸಿಂಧೂರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News