ನ್ಯಾಯಾಧೀಶರು ಸರ್ವಜ್ಞರಲ್ಲ ಎಂಬ ಹೇಳಿಕೆಗೆ ಬದ್ಧ, ವಿಷಾದ ವ್ಯಕ್ತಪಡಿಸುವ ಪ್ರಶ್ನೆಯೇ ಇಲ್ಲ: ಸಿ.ಟಿ. ರವಿ

Update: 2021-05-14 16:18 GMT

ಚಿಕ್ಕಮಗಳೂರು, ಮೇ 14: ನ್ಯಾಯಾಧೀಶರು ಮತ್ತು ನ್ಯಾಯಾಂಗದ ಬಗ್ಗೆ ಗೌರವ, ಬದ್ಧತೆ ಇದೆ. ಆದರೆ, ಜಗತ್ತಿನ 780 ಕೋಟಿ ಜನರಲ್ಲಿ ಯಾರೊಬ್ಬರೂ ಸರ್ವಜ್ಞರಿಲ್ಲ. ಎಲ್ಲವೂ ತಿಳಿದಿದೆ ಎಂದು ನ್ಯಾಯಾಧೀಶರು, ಪ್ರಧಾನಿ, ಪ್ರತಿಪಕ್ಷ ನಾಯಕರು ಕೂಡ ಹೇಳಲಾಗದು. ಮೊಸರಲ್ಲಿ ಕಲ್ಲು ಹುಡುಕುವ ಜಾಯಮಾನದವರು ನನ್ನ ಹೇಳಿಕೆಯನ್ನು ಅಸಂವಿಧಾನಿಕ, ನ್ಯಾಯಾಂಗಕ್ಕೆ ಅಗೌರವ ಎನ್ನುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಂಗ, ಸಂವಿಧಾನದ ಬಗ್ಗೆ ಗೌರವ ಮೊದಲಿನಿಂದಲೂ ಇದೆ. ಅದನ್ನು ಯಾರಿಂದಲೂ ಕಲಿಯಬೇಕಿಲ್ಲ. ನಾನು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ವಿಷಾದ ವ್ಯಕ್ತಪಡಿಸಬೇಕು ಎಂದು ಕೇಳುವುದೇ ಒತ್ತಡ ಹಾಕುವ ತಂತ್ರವಾಗಿದೆ. ನ್ಯಾಯಾಧೀಶರು ಸರ್ವಜ್ಞರಲ್ಲ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧವಾಗಿದ್ದೇನೆ. ವಿಷಾದ ವ್ಯಕ್ತಪಡಿಸುವ ಪ್ರಶ್ನೆಯೇ ಬರುವುದಿಲ್ಲ ಎಂದರು.

1975ರಲ್ಲಿ ತುರ್ತು ಪರಿಸ್ಥಿತಿ ಹೇರಿ ವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಂಡು, ಜನರನ್ನು ಜೈಲಿಗಟ್ಟಿದವರು ಈಗ ನ್ಯಾಯಾಂಗದ ಬಗ್ಗೆ ಪಾಠ ಮಾಡುತ್ತಿದ್ದಾರೆ. ನ್ಯಾಯಾಂಗದ ಬಗ್ಗೆ ಗೌರವ ಇದ್ದಿದ್ದರೆ ಕುರ್ಚಿ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿ ಸಾವಿರಾರು ಜನರನ್ನು ಕೊಂದು, ಜನರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿರಲಿಲ್ಲ ಎಂದು ಕಾಂಗ್ರೆಸ್‍ಗೆ ತಿರುಗೇಟು ನೀಡಿದ ಸಿ.ಟಿ.ರವಿ, ಸಿಎಎ, ಅಯೋಧ್ಯೆ ತೀರ್ಪು ಬಂದಾಗ ನ್ಯಾಯಾಲಯಗಳು ಮೋದಿ ಆಲಯಗಳಾಗಿವೆ ಎಂದವರು, ನ್ಯಾಯಾಂಗದ ಪರಿಶುದ್ಧತೆಯನ್ನು ಅನುಮಾನದಿಂದ ನೋಡಿದ್ದವರು ಈಗ ಬಿಜೆಪಿಗೆ ಪಾಠ ಹೇಳುತ್ತಿದ್ದಾರೆ. ಬಿಜೆಪಿಗೆ ನ್ಯಾಯಾಂಗ, ಇವಿಎಂ, ಕಾನೂನು, ಚುನಾವಣಾ ಆಯೋಗದ ಬಗ್ಗೆ ಗೌರವ ಇದೆ. ನ್ಯಾಯಾಂಗದ ಪಾವಿತ್ರ್ಯತೆಯನ್ನು ಸಂದರ್ಭಕ್ಕೆ ತಕ್ಕಂತೆ ಬದಲಿಸಬಾರದು ಎಂದರು.

ದಲಿತ ಶಾಸಕನ ಮನೆಗೆ ಬೆಂಕಿ ಹಾಕಿದವರನ್ನು ಅಮಾಯಕರು ಎಂದು ಬಿಂಬಿಸಿದವರು ಮಾನವೀಯತೆಯ ಪಾಠ ಮಾಡುತ್ತಿದ್ದಾರೆ. 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ನೆಪದಲ್ಲಿ 17 ಸಾವಿರ ಸಿಖ್ಖರ ನರಮೇಧ, ಲೂಟಿ, ಅತ್ಯಾಚಾರ ಮಾಡಿದ ಪಾಪಕೃತ್ಯ ಮಾನವೀಯತೆಗೆ ಸಮರ್ಥನೆಯೇ? ಭೂಪಾಲ್ ಅನಿಲ ದುರಂತದ ಆರೋಪಿಯನ್ನು ರಾತ್ರೋ ರಾತ್ರಿ ವಿಮಾನ ಹತ್ತಿಸಿ ವಿದೇಶಕ್ಕೆ ಕಳಿಸಿದ್ದನ್ನು ಮರೆತಿದ್ದೀರಾ ಎಂದು ಪ್ರಶ್ನಿಸಿದ ಅವರು, ಸಂವಿಧಾನದ ಬಗ್ಗೆ ಮಾತನಾಡುವ, ಸಂವಿಧಾನ ಅಪಾಯದಲ್ಲಿದೆ ಎಂದು ಎಚ್ಚರಿಸುವವರು ಪಶ್ಚಿಮ ಬಂಗಾಳದಲ್ಲಿ ದೌರ್ಜನ್ಯಕ್ಕೆ ಒಳಗಾದ ಜನರಿಗೆ ಸಾಂತ್ವನ ಹೇಳಲು ಹೋದ ಕೇಂದ್ರ ಸಚಿವರ ಕಾರು ತಡೆದು ಹಲ್ಲೆ ಮಾಡಿದರು. ಇದಕ್ಕೆ ಸಂವಿಧಾನದ ರಕ್ಷಣೆ ಇದೆಯೇ? ರಾಜ್ಯಪಾಲರು ಕೂಡ ದೌರ್ಜನ್ಯ ನಡೆದ ಸ್ಥಳಕ್ಕೆ ಹೋಗದಂತೆ ತಡೆದಿದ್ದಾರೆ. ಇಂತಹ ವಿಚಾರಗಳಲ್ಲಿ ಜಾಣ ಕುರುಡು, ಜಾಣ ಮೌನ ವಹಿಸುವವರ ಎಡಬಿಡಂಗಿತನ ಪ್ರಶ್ನಾರ್ಹವಾಗಿದೆ ಎಂದರು.

ಜಿಲ್ಲೆಯಲ್ಲಿ ಪ್ರಸಕ್ತ 150 ಆಕ್ಸಿಜನ್ ಸಿಲಿಂಡರ್ ಗಳಿದ್ದು, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಇನ್ನೂ 150 ಸಿಲಿಂಡರ್ ಗಳ ಅಗತ್ಯವಿದೆ. ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಜಿಲ್ಲಾಡಳಿತ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಶಿವಮೊಗ್ಗ, ಹಾಸನ, ಬಳ್ಳಾರಿ ಜಿಲ್ಲಾಕಾರಿಗಳು, ರಾಜ್ಯ ಟಾಸ್ಕ್ ಫೋರ್ಸ್ ಜತೆ ಸಂಪರ್ಕ ಸಾಧಿಸಿ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಸಕ್ತ 150 ಆಕ್ಸಿಜನ್ ಸಿಲಿಂಡರ್ ಗಳು 10-12 ಗಂಟೆಗೆ ಸಾಕಾಗುತ್ತದೆ. ಇನ್ನೂ 150 ಸಿಲಿಂಡರ್ ಗಳ ವ್ಯವಸ್ಥೆಯಾದರೆ ಒಂದೊಮ್ಮೆ ಆಕ್ಸಿಜನ್ ಟ್ಯಾಂಕರ್ ಬರುವುದು ತಡವಾದರೂ 24 ಗಂಟೆಯೂ ಸಮಸ್ಯೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು. ಖಾಸಗಿ ಆಸ್ಪತ್ರೆಗಳಲ್ಲಿ 20 ಜಂಬೋ ಸಿಲಿಂಡರ್ ಗಳಿದ್ದು, ಸದ್ಯಕ್ಕೆ ಖಾಸಗಿ ಆಸ್ಪತ್ರೆಗಳಿಗೂ ಆಕ್ಸಿಜನ್ ಕೊಟ್ಟು, ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ 160 ಆಕ್ಸಿನೇಟೆಡ್ ಬೆಡ್‍ಗಳಲ್ಲಿ 152 ಭರ್ತಿಯಾಗಿವೆ. 28 ವೆಂಟಿಲೇಟರ್ ಗಳೂ ಭರ್ತಿಯಾಗಿವೆ. ಲಾಕ್‍ಡೌನ್ ಕಾರಣದಿಂದ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಇನ್ನಷ್ಟು ಕಠಿಣ ನಿಯಮಗಳನ್ನು ಅನುಸರಿಸಿದರೆ ಸೋಂಕಿನ ಪ್ರಮಾಣವನ್ನು 10 ಸಾವಿರದ ಒಳಗೆ ತರಬಹುದು ಎಂದು ಅವರು ಹೇಳಿದರು.

ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ದಿ ವೇಣುಗೋಪಾಲ್, ನಗರ ಅಧ್ಯಕ್ಷ ಮಧುಕುಮಾರರಾಜ್ ಅರಸ್, ನಗರಸಭೆ ಮಾಜಿ ಸದಸ್ಯ ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News