×
Ad

ವಾಯುಭಾರ ಕುಸಿತ: ಒಳನಾಡು, ಕರಾವಳಿ ಭಾಗದಲ್ಲಿ ಇನ್ನೊಂದು ವಾರ ಭಾರೀ ಮಳೆ ಸಾಧ್ಯತೆ

Update: 2021-05-14 23:00 IST

ಬೆಂಗಳೂರು, ಮೇ 14: ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಇನ್ನೊಂದು ವಾರ ಮಳೆ ಮುಂದುವರಿಯಲಿದೆ.  

ಅರಬ್ಬೀ ಸಮುದ್ರದಲ್ಲಿ ಕೇಂದ್ರೀಕೃತವಾಗಿರುವ ವಾಯುಭಾರ ಕುಸಿತ ಪ್ರಬಲವಾಗುತ್ತಿದ್ದು, ಮೇ 16ರ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದ್ದಾರೆ.

ವಾಯುಭಾರ ಕುಸಿತದ ಕೇಂದ್ರ ಸ್ಥಾನದಲ್ಲಿ ರಾಜ್ಯ ಇಲ್ಲದಿದ್ದರೂ ಅದರ ವ್ಯಾಪ್ತಿಗೆ ಒಳಪಡುವುದರಿಂದ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ. ಬೆಂಗಳೂರು ಸೇರಿ ರಾಜ್ಯದ ಒಳನಾಡು ಹಾಗೂ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿಯಲಿದೆ. ಕೆಲವೆಡೆ ಸಾಧಾರಣ, ಮತ್ತೆ ಕೆಲವೆಡೆ ಗುಡುಗು ಮಿಂಚಿನಿಂದ ಕೂಡಿದ ಹೆಚ್ಚಿನ ಪ್ರಮಾಣದ ಮಳೆಯಾಗಬಹುದು ಎಂದು ಹೇಳಿದರು.

ಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯದಲ್ಲಿ ಸಾಧಾರಣದಿಂದ ಉತ್ತಮವಾದ ಮಳೆಯಾಗುತ್ತಿದೆ. ಗುರುವಾರ ಬೆಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು ಸೇರಿ ರಾಜ್ಯದ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಿದೆ ಎಂದರು.

ಈಗಾಗಲೇ ಪೂರ್ವ ಮುಂಗಾರು ಬೆಳೆಗಳ ಬಿತ್ತನೆಯನ್ನು ಕೆಲವು ರೈತರು ಮಾಡಿದ್ದಾರೆ. ಇನ್ನೂ ಕೆಲವು ರೈತರು ಮುಂಗಾರು ಹಂಗಾಮಿನ ಸಿದ್ಧತೆಯಲ್ಲಿ ತೊಡಗಿದ್ದಾರೆ. ಬೇಸಿಗೆಯಲ್ಲಿ ನಿರಂತರವಾಗಿ ಮಳೆ ಬರುತ್ತಿರುವುದರಿಂದ ಮಾವು ಬೆಳೆಗಾರರಿಗೆ ಸ್ವಲ್ಪ ಮಟ್ಟಿನ ತೊಂದರೆಯಾದರೂ ಬಹುತೇಕ ಕೃಷಿಕರಿಗೆ ಅನುಕೂಲವಾಗಲಿದೆ. ಬೇಸಿಗೆಯ ಬಿಸಿಲಿನ ತಾಪವೂ ಕಡಿಮೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News