×
Ad

ನ್ಯಾಯಾಂಗದ ಕುರಿತು ಡಿವಿಎಸ್, ಸಿ.ಟಿ.ರವಿ ಕೀಳು ಮಟ್ಟದ ಹೇಳಿಕೆ: ಭಾರತ ಕಮ್ಯುನಿಸ್ಟ್ ಪಕ್ಷ ಖಂಡನೆ

Update: 2021-05-14 23:01 IST

ಬೆಂಗಳೂರು, ಮೇ 14: ನ್ಯಾಯಾಧೀಶರು ಸರ್ವಜ್ಞರಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಲಸಿಕೆ ಉತ್ಪಾದನೆ ಆಗದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ ಎಂದಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಹೇಳಿಕೆಗಳಿಗೆ ಭಾರತ ಕಮ್ಯುನಿಸ್ಟ್ ಪಕ್ಷ ಕರ್ನಾಟಕ ರಾಜ್ಯ ಮಂಡಳಿ ತೀವ್ರ ಖಂಡನೆ ವ್ಯಕ್ತಪಡಿಸಿದೆ.

ಶುಕ್ರವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಭಾರತ ಕಮ್ಯುನಿಸ್ಟ್ ಪಕ್ಷ, ಕೊರೋನ ಸೋಂಕು ತಡೆದು ಜನರಿಗೆ ಸೂಕ್ತ ರಕ್ಷಣೆ ಕೊಡಲು ಮತ್ತು ಪರಿಸ್ಥಿತಿಯನ್ನು ಎದುರಿಸಲು ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸದಲ್ಲಿ ಸರಕಾರ ವಿಫಲವಾದಾಗ ನ್ಯಾಯಾಂಗ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸಹಜವಾಗಿಯೇ ಸುಪ್ರೀಂಕೋರ್ಟ್ ಹಾಗೂ ರಾಜ್ಯ ಹೈಕೋರ್ಟ್ ಪ್ರಜೆಗಳ ರಕ್ಷಣೆಗೆ ಧಾವಿಸಿವೆ. ಆದರೆ, ಈ ವಿಚಾರವನ್ನೇ ವೈಯುಕ್ತಿಕವಾಗಿ ತೆಗೆದುಕೊಂಡು ನ್ಯಾಯಾಂಗದ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿರುವುದನ್ನು ಖಂಡಿಸುತ್ತೇವೆ ಎಂದು ಪಕ್ಷದ ಕಾರ್ಯದರ್ಶಿ ಸಾರ್ಥಿ ಸುಂದರೇಶ್ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ಮಸೀದಿ ಕೆಡವಿದ್ದು ತಪ್ಪು, ಆದರೂ ಆ ಜಾಗದಲ್ಲಿ ರಾಮ ಮಂದಿರ ಕಟ್ಟಿಕೊಳ್ಳಿ ಎಂದು ತೀರ್ಪು ನೀಡಿದವರು ಸರ್ವಜ್ಞರು. ಅವರು ನಿವೃತ್ತಿಯಾದ ಬಳಿಕ ರಾಜ್ಯಸಭೆಯಲ್ಲಿ ತನ್ನ ಸರ್ವಜ್ಞ ಜ್ಞಾನವನ್ನು ಎಲ್ಲರಿಗೂ ಹಂಚುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಬಾಬರಿ ಮಸೀದಿ ಕೆಡವಿದ್ದನ್ನು ಇಡೀ ಪ್ರಪಂಚವೇ ನೋಡಿದೆ. ಆದರೂ ಈ ಘಟನೆಗೆ ಸರಿಯಾದ ಸಾಕ್ಷಿ ಇಲ್ಲವೆಂದು ಬಿಜೆಪಿ, ಸಂಘ ಪರಿವಾರದ ಎಲ್ಲ ಆರೋಪಿಗಳನ್ನೂ ಖುಲಾಸೆ ಮಾಡಿದ ಸರ್ವಜ್ಞ ಎಲ್ಲಿದ್ದಾರೋ ಗೊತ್ತಿಲ್ಲ. ಅಲ್ಲದೆ, ಇನ್ನುಳಿದ ಎಲ್ಲ ಸರ್ವಜ್ಞರೂ ನಾಗಪುರದಲ್ಲಿದ್ದಾರೆ. ಹೀಗಾಗಿ, ಸಿ.ಟಿ.ರವಿಯವರು ಹೇಳಿರುವಂತೆ ಈಗಿರುವ ನ್ಯಾಯಾಧೀಶರುಗಳು ಯಾರೂ ಸರ್ವಜ್ಞರಲ್ಲ ಎನ್ನುವಂತಾಗಿದೆ ಎಂದು ತಿಳಿಸಿದ್ದಾರೆ.

ಲಸಿಕೆ ಸಿಗದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ? ಎಂದು ಕೇಂದ್ರ ಸಚಿವ ಸದಾನಂದಗೌಡರು ಹೇಳಿಕೆ ನೀಡಿದ್ದಾರೆ. ಮೂರನ್ನೂ ಬಿಟ್ಟವರು ಊರಿಗೆ ದೊಡ್ಡವರಾದಾಗ ಅವರು ನೇಣು ಹಾಕಿಕೊಳ್ಳುತ್ತಾರೆಯೇ? ಈ ಭಂಡ ರಾಜಕಾರಣಿಗಳಿಂದ ಜನ ಅದನ್ನು ನಿರೀಕ್ಷಿಸುವುದಿಲ್ಲ ಎಂದರು.

ಸಿ.ಟಿ.ರವಿ, ಸದಾನಂದಗೌಡರು ಯಾವುದೇ ಸಂವೇದನೆ ಇಲ್ಲದವರು ಬಾಯಿ ಮುಚ್ಚಿ ಕುಳಿತುಕೊಂಡರೆ ಒಳ್ಳೆಯದು. ಜನರಿಗೆ ತಮ್ಮ ಕೆಲಸ ಮಾಡಿಸಿಕೊಳ್ಳುವುದು ಗೊತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗಾಗಿ ಗುಜರಾತ್‍ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ, ಕುಂಬಮೇಳ, ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಮಹಾರ್‍ಯಾಲಿಗಳ ಪ್ರತಿಫಲವಾಗಿಯೇ ಇಂದು ಕೊರೋನ ಹೆಚ್ಚಳಕ್ಕೆ ಕಾರಣವಾಗಿದೆ. ಜತೆಗೆ ಜಾಗಟೆ ಹೊಡೆಯುವುದು, ದೀಪ ಬೆಳಗುವುದು, ಮೈಗೆಲ್ಲ ಸೆಗಣಿ ಲೇಪನ, ಗಂಜಲದ ತೀರ್ಥಗಳು ಈ ರೋಗ ಹರಡಲು ಪೂರಕವಾಗಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೊರೋನ ನಿಯಂತ್ರಣಕ್ಕೆ ಬೇಕಾದ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವುದನ್ನು ಮರೆತಿದೆ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News