ಅಕ್ಟೋಬರ್ ನಲ್ಲಿ ಕೋವಿಡ್ ಮೂರನೆ ಅಲೆ ಆರಂಭ: ಸಚಿವ ಆರ್.ಅಶೋಕ್

Update: 2021-05-15 11:40 GMT

ಬೆಂಗಳೂರು, ಮೇ 15: ಮುಂದಿನ ಅಕ್ಟೋಬರ್ ನಿಂದ ಆರಂಭವಾಗಿ ಎರಡು ತಿಂಗಳುಗಳ ಕಾಲ ಕೋವಿಡ್ ಮೂರನೇ ಅಲೆ ಇರಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಶನಿವಾರ ನಗರದ ನಾಗವಾರ ವ್ಯಾಪ್ತಿಯ ಹಜ್ ಭವನದಲ್ಲಿ ಎಲ್ಲ ಸೌಲಭ್ಯಗಳೊಂದಿಗೆ 100 ಆಮ್ಲಜನಕಯುಕ್ತ ಹಾಸಿಗೆಗಳ ವ್ಯವಸ್ಥೆ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಇದೇ ವಾರ್ಷಿಕ ಸಾಲಿನ ಅಕ್ಟೋಬರ್, ನವೆಂಬರ್ ನಲ್ಲಿ ಕೋವಿಡ್ ಮೂರನೆ ಅಲೆಯೂ ಬರಲಿದ್ದು, ಈ ಸಂಬಂಧ ಆರೋಗ್ಯ ತಜ್ಞರು ಮಾಹಿತಿ ಬಿಚ್ಚಿಟ್ಟಿದ್ದಾರೆ. ಎರಡನೆ ಅಲೆ ಮುಗಿಯುತ್ತಿದ್ದಂತೆ ಮೂರನೇ ಅಲೆ ಶುರುವಾಗಲಿದೆ ಎಂದರು.

ಮೂರನೇ ಅಲೆಯನ್ನು ನಿಭಾಯಿಸಲು ಸರಕಾರ ಪೂರ್ಣ ಪ್ರಮಾಣದ ಸಿದ್ಧತೆಯನ್ನು ಈಗಾಗಲೇ ಆರಂಭಿಸಿದ್ದು, ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಅವರು, ಕೊರೋನ ಮೂರನೆ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಸೋಂಕು ತಗಲುವ ಆತಂಕ ಇದೆ. ಈ ಸಂಬಂಧ ಆಯಾ ಜಿಲ್ಲೆಗಳಲ್ಲಿ ಮಕ್ಕಳಿಗಾಗಿ ಆಸ್ಪತ್ರೆ, ಆರೈಕೆ ಕೇಂದ್ರ, ಕಲ್ಯಾಣ ಮಂಟಪಗಳಲ್ಲೂ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಹೇಳಲಾಗಿದೆ ಎಂದು ಮಾಹಿತಿ ನೀಡಿದರು.

ಆಕ್ಸಿಜನ್‍ಗಾಗಿ ಯಾವುದೇ ಕೋವಿಡ್ ರೋಗಿ ಬೀದಿಯಲ್ಲಿ ನಿಲ್ಲಬಾರದು. ಇದಕ್ಕಾಗಿ ಎಲ್ಲೆಡೆ ಆಕ್ಸಿಜನ್ ಕೇಂದ್ರಗಳಿಗೆ ಒತ್ತು ನೀಡಲಾಗುತ್ತಿದೆ. ಹೀಗಾಗಿ, ಮೊಬೈಲ್ ಆಕ್ಸಿಜನ್ ಮಾಡಲಾಗಿದೆ. ಜತೆಗೆ, ಕೋವಿಡ್ ಆರೈಕೆ ಕೇಂದ್ರಗಳಲ್ಲೂ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಹಜ್ ಭವನ ಆರೈಕೆ ಕೇಂದ್ರದಲ್ಲಿ ಒಟ್ಟು 430 ಹಾಸಿಗೆ ಲಭ್ಯವಿದ್ದು, ಮೊದಲ ಹಂತದಲ್ಲಿ 100 ಆಮ್ಲಜನಕಯುಕ್ತ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದಾದ ನಂತರ ಎರಡನೆ ಹಂತದಲ್ಲಿ 50 ಐಸಿಯು ಹಾಸಿಗೆ ರಚನೆಯ ಕಾರ್ಯ ಯೋಜನೆ ರೂಪಿಸಲಾಗಿದ್ದು, ತ್ವರಿತವಾಗಿ ಪೂರ್ಣಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಕೇಂದ್ರದ ಯಶಸ್ವಿ ನಿರ್ವಹಣೆಗಾಗಿ 8 ವೈದ್ಯರು, 12 ದಾದಿಯರು, 12 ಹೌಸ್ ಕೀಪಿಂಗ್, ಡಾಟಾ ಆಪರೇಟರ್ ಗಳು ಹಾಗೂ ಮಾರ್ಷಲ್‍ಗಳನ್ನು ಸಹ ನಿಯೋಜಿಸಲಾಗಿದ್ದು, ತುರ್ತು ಸೇವೆಗಾಗಿ ಎರಡು ಆಂಬುಲೆನ್ಸ್ ಸಹ ಲಭ್ಯ ಇರಲಿದೆ ಎಂದು ಆರ್.ಅಶೋಕ್ ತಿಳಿಸಿದರು.

ಈ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಶಾಸಕ ಕೃಷ್ಣ ಬೈರೇಗೌಡ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ಮಣಿವಣ್ಣನ್, ವಲಯ ಆಯುಕ್ತ ಅನ್ಬುಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಂಟಿ ಆಯುಕ್ತರು ಸರ್ಫರಾಜ್ ಖಾನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News