ಹಣಕಾಸಿನ ಕೊರತೆ: ಮೃತ ವ್ಯಕ್ತಿಯ ಶವ ಆಸ್ಪತ್ರೆಯಲ್ಲೇ ಬಿಟ್ಟು ಹೋದ ಕುಟುಂಬಸ್ಥರು
ಗುಂಡ್ಲುಪೇಟೆ, ಮೇ 15: ಕೊರೋನ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರು ಹಣಕಾಸಿನ ಕೊರತೆಯಿಂದಾಗಿ ಶವವನ್ನು ಆಸ್ಪತ್ರೆಯಿಂದ ಪಡೆಯುಲು ನಿರಾಕರಿಸಿದ ಘಟನೆ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಮೂಕಳ್ಳಿ ಕಾಲನಿಯ ಸೋಲಿಗ ಜನಾಂಗದ ಶಿವಯ್ಯ ಮೃತಪಟ್ಟ ವ್ಯಕ್ತಿ. ಇವರು ಉಸಿರಾಟದ ಸಮಸ್ಯೆ ಹಿನ್ನೆಲೆ ಮೈಸೂರಿನ ಅರವಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಯ್ಯ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಶಿವಯ್ಯ ಅವರದ್ದು ಬಡ ಕುಟುಂಬವಾಗಿದ್ದು, ಮನೆಯಲ್ಲಿ ದನ ಕುರಿ ಎಲ್ಲಾ ಮಾರಿ ಈಗಾಗಲೇ 70 ಸಾವಿರ ರೂಪಾಯಿ ಹಣ ಪಾವತಿ ಮಾಡಿದ್ದರು. ಇನ್ನೂ ಒಂದು ಲಕ್ಷ ಹಣ ಕೊಡಿ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಹೇಳಿದ ಹಿನ್ನಲೆ, ಕುಟುಂಬಸ್ಥರು ಆಸ್ಪತ್ರೆಗೆ ಕಟ್ಟಲು ಹಣವಿಲ್ಲದೆ ಮೃತದೇಹವನ್ನು ಅಲ್ಲೇ ಬಿಟ್ಟು ಬಂದಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯ ಅಧಿಕಾರಿಗಳಿಗೆ ಮಾನವೀಯತೆ ಅನುವುದು ಇಲ್ಲವೇ ಇಲ್ಲ. ದುಡ್ಡು ದುಡ್ಡು ಅಂತ ಸಾಯುತ್ತಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣೆಗಳು ಕಾಲು ಮುಟ್ಟಲು ಬರುತ್ತಾರೆ. ಇಂತಹ ಸಂದರ್ಭಗಳಲ್ಲಿ ಪೋನ್ ಮಾಡಿದರೂ ಕರೆ ಸ್ವೀಕರಿಸಿರುವುದಿಲ್ಲ
-ಮೂರ್ತಿ, ಮೃತ ಶಿವಯ್ಯ ಅವರ ಪುತ್ರ