ಒಂದು ಕೋಟಿ ರೂ. ನೀಡಲು ಕೋರಿ ಶಾಸಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ

Update: 2021-05-15 12:34 GMT

ಬೆಂಗಳೂರು, ಮೇ 15: `ಕೋವಿಡ್ ಬಿಕ್ಕಟ್ಟಿನ ಕಾಲದಲ್ಲಿ ಪಕ್ಷದ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರುಗಳ ಕ್ಷೇತ್ರಗಳ ಅಭಿವೃದ್ಧಿಗೆಂದು ನೀಡಲಾಗುವ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ತಲಾ 1 ಕೋಟಿ ರೂ., ಒಟ್ಟಾರೆ 100 ಕೋಟಿ ರೂ.ಗಳನ್ನು ಸಂಗ್ರಹಿಸಿ, ಆ ಹಣದಲ್ಲಿ ಲಸಿಕೆ ಖರೀದಿ ಮಾಡಿ ಸಾರ್ವಜನಿಕರಿಗೆ ಉಚಿತವಾಗಿ ನೀಡಲು ಪಕ್ಷದ ವತಿಯಿಂದ ನಿರ್ಧರಿಸಲಾಗಿದೆ. ಇದಕ್ಕಾಗಿ ಪಾರದರ್ಶಕ ಯೋಜನೆ ರೂಪಿಸಿ ಕೇಂದ್ರ, ರಾಜ್ಯ ಸರಕಾರದ ಅನುಮತಿ ಪಡೆಯಲಾಗುವುದು. ಈ ಸದುದ್ದೇಶಕ್ಕಾಗಿ ತಾವು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 1 ಕೋಟಿ ರೂ.ಗಳನ್ನು ಕೋವಿಡ್ ಲಸಿಕೆ ನೀಡುವ ಉದ್ದೇಶಕ್ಕಾಗಿ ನೀಡಬೇಕು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಎಲ್ಲ ಶಾಸಕರಿಗೆ ಪತ್ರ ಬರೆದಿದ್ದಾರೆ.

ಶನಿವಾರ ಪಕ್ಷದ ಶಾಸಕರಿಗೆ ಪತ್ರ ಬರೆದಿರುವ ಅವರು, ಸರಕಾರ ಕೋವಿಡ್ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಸಂಪೂರ್ಣ ಸೋತು ಹೋಗಿದೆ. 15 ದಿನಗಳಲ್ಲಿ ನಗರಗಳಷ್ಟೆ ವ್ಯಾಪಕವಾಗಿ ಗ್ರಾಮೀಣ ಪ್ರದೇಶದ ಜನರು ಈ ಮಾರಣಾಂತಿಕ ಸೋಂಕಿಗೆ ತುತ್ತಾಗಿ ನರಳುತ್ತಿದ್ದಾರೆ. ಆಕ್ಸಿಜನ್, ಅಗತ್ಯ ಔಷಧ, ಐಸಿಯು ಬೆಡ್‍ಗಳು, ವೆಂಟಿಲೇಟರ್‍ಗಳಿಲ್ಲದೆ ಜನ ಮರಣ ಹೊಂದುತ್ತಿದ್ದಾರೆ. ಇವು ಕೋವಿಡ್‍ನಿಂದಾದ ದುರಂತಗಳಷ್ಟೆ ಅಲ್ಲ. ಕೇಂದ್ರ, ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ, ಅದಕ್ಷ, ಸರ್ವಾಧಿಕಾರಿ ಧೋರಣೆಯ, ವೈಜ್ಞಾನಿಕ ಮನೋಭಾವವಿಲ್ಲದ, ದೂರದೃಷ್ಟಿ ಇಲ್ಲದ ಬಿಜೆಪಿ ಸರಕಾರಗಳೆರಡೂ ಸೇರಿಕೊಂಡು ನಡೆಸುತ್ತಿರುವ ಕಗ್ಗೊಲೆಗಳು ಎಂದು ದೂರಿದ್ದಾರೆ.

ಇಂಥ ಕೆಟ್ಟ ಸಂದರ್ಭದಲ್ಲಿ ನಮ್ಮ ಪಕ್ಷದ ಅನೇಕ ಶಾಸಕರು, ಸಂಸದರು, ಮುಖಂಡರುಗಳು ಕೋವಿಡ್ ರೋಗಿಗಳ ಆರೈಕೆಗಾಗಿ ಹಲವು ವ್ಯವಸ್ಥೆಗಳನ್ನು ಮಾಡಿದ್ದೀರಿ. ಆಹಾರ, ಆಹಾರ ಪದಾರ್ಥಗಳ ಕಿಟ್‍ಗಳನ್ನೂ ನೀಡುತ್ತಿದ್ದೀರಿ. ಜನರಿಗೆ ಲಸಿಕೆ ಹಾಕಿಸುವ ಕಾರ್ಯಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದೀರಿ. ಜನರ ನೋವಿಗೆ ಸ್ಪಂದಿಸುತ್ತಿರುವ ನಿಮ್ಮೆಲ್ಲರನ್ನೂ ನಾನು ಶ್ಲಾಘಿಸುತ್ತೇನೆ. ಜೊತೆಗೆ ಜನರಿಗೆ ಲಸಿಕೆ ನೀಡುವ ವಿಷಯದಲ್ಲೂ ಸಂಪೂರ್ಣ ಅರಾಜಕತೆಯನ್ನು ಸೃಷ್ಟಿಸಿದೆ. ಮೇ 1ರಿಂದ 18 ವರ್ಷ ತುಂಬಿದ ಎಲ್ಲರಿಗೂ ವ್ಯಾಕ್ಸಿನ್ ನೀಡುವುದಾಗಿ ಪ್ರಕಟಣೆಗಳನ್ನು ಹೊರಡಿಸಿ ಪ್ರಚಾರ ಪಡೆಯಿತು. ಜನರಲ್ಲಿ ನಿರೀಕ್ಷೆಯನ್ನೂ ಹುಟ್ಟಿಸಿತ್ತು.

ಆದರೆ, ಕೇಂದ್ರ ಸರಕಾರದಿಂದ, ಕಂಪೆನಿಗಳಿಂದ ವ್ಯಾಕ್ಸಿನ್ ಬರುತ್ತಿಲ್ಲವೆಂದು ಹೇಳಿ ಲಸಿಕೆ ನೀಡುವ ಕಾರ್ಯಕ್ರಮಗಳನ್ನೇ ಸ್ಥಗಿತ ಗೊಳಿಸಲಾಗುತ್ತಿದೆ. ಜನರು ಹತಾಶರಾಗಿದ್ದಾರೆ. ಭೀತಿಗೊಳಗಾಗಿದ್ದಾರೆ. ಸರಕಾರ ತನ್ನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಲಸಿಕೆಗಳನ್ನು ವಿವಿಧ ಮೂಲಗಳಿಂದ ಪಡೆದು ನೀಡಬೇಕಾಗಿತ್ತು. ಕೇಂದ್ರ ಸರಕಾರ ತನ್ನ ಬಜೆಟ್‍ನಲ್ಲಿ 35 ಸಾವಿರ ಕೋಟಿ ರೂ.ಲಸಿಕೆ ನೀಡುವ ಉದ್ದೇಶಗಳಿಗೆ ಮೀಸಲಿಡುವುದಾಗಿ ಘೋಷಿಸಿತ್ತು. ಆದರೆ, ಈಗ ಸಂಪೂರ್ಣ ಉಲ್ಟಾ ಮಾತನಾಡುತ್ತಿದೆ. ಈ ಕುರಿತಂತೆ ಒತ್ತಾಯ ಮಾಡಬೇಕಾದ ರಾಜ್ಯದ 25 ಜನ ಸಂಸದರು ಬಾಯಿಗೆ ಬೀಗ ಜಡಿದುಕೊಂಡು ಕುಳಿತಿದ್ದಾರೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News