×
Ad

ಕೊಡಗಿನಲ್ಲಿ ನಿರಂತರ ಮಳೆ: ಜಿಲ್ಲೆಗೆ ಆಗಮಿಸಿದ ಎನ್‌ಡಿಆರ್‌ಎಫ್ ತಂಡ

Update: 2021-05-15 18:54 IST

ಮಡಿಕೇರಿ ಮೇ 15: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಎರಡು ದಿನಗಳಿಂದ ತೀವ್ರತೆಯನ್ನು ಪಡೆದುಕೊಂಡಿದೆ. ಚಂಡಮಾರುತದ ಪರಿಣಾಮ ಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ನದಿತೀರ ಹಾಗೂ ಬೆಟ್ಟಗುಡ್ಡದ ನಿವಾಸಿಗಳಲ್ಲಿ ಆತಂಕ ಮೂಡಿದೆ.

ಕೊಡಗು ಜಿಲ್ಲೆ ಸತತ 3 ವರ್ಷಗಳಿಂದ ಪ್ರಾಕೃತಿಕ ವಿಕೋಪಗಳಿಗೆ ಸಿಲುಕುತ್ತಿದ್ದು, ಜೀವ ಹಾನಿ ಜೊತೆಯಲ್ಲಿ ಆಸ್ತಿ ಪಾಸ್ತಿ ಹಾನಿ ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಗಾರು ಪೂರ್ವದಲ್ಲೇ ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತದ ಕೋರಿಕೆಯ ಮೇರೆಗೆ ರಾಜ್ಯ ಸರಕಾರ ಮಡಿಕೇರಿಗೆ ಎನ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಿದೆ. 10ನೇ ಎನ್‌ಡಿಆರ್‌ಎಫ್ ಬೆಟಾಲಿಯನ್‍ನ 20 ಮಂದಿ ಯೋಧರನ್ನು ಕೊಡಗು ಜಿಲ್ಲೆಗೆ ಕಳುಹಿಸಲಾಗಿದ್ದು, ಶುಕ್ರವಾರ ರಾತ್ರಿ 10.30 ಗಂಟೆಗೆ ಮಡಿಕೇರಿಗೆ ಬಂದಿಳಿದಿದ್ದಾರೆ. ಈ ರಕ್ಷಣಾ ಯೋಧರ ತಂಡ ನಗರದ ಪೊಲೀಸ್ ಸಮುದಾಯ ಭವನ ಮೈತ್ರಿಯಲ್ಲಿ ಬೀಡು ಬಿಟ್ಟಿದ್ದು, ಮಳೆಗಾಲ ಮುಕ್ತಾಯವಾಗುವವರೆಗೆ ಜಿಲ್ಲೆಯಲ್ಲಿರಲಿದೆ ಎಂದು ತಿಳಿದು ಬಂದಿದೆ.

ಆಂಧ್ರ ಪ್ರದೇಶದ ವಿಜಯವಾಡ ಗುಂಟೂರಿನ 10ನೇ ಎನ್‌ಡಿಆರ್‌ಎಫ್ ತಂಡಕ್ಕೆ ಇನ್ಸ್ ಪೆಕ್ಟರ್ ಬಬ್ಲು ಬಿಸ್ವಾಸ್ ಕಮಾಡಿಂಗ್ ಆಫೀಸರ್ ಆಗಿದ್ದು, ಅವರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯಲಿದೆ. ಅವರೊಂದಿಗೆ ಸಹಾಯಕ ಅಧಿಕಾರಿಯಾಗಿ ಹೆಡ್ ಕಾನ್ಸ್ ಟೇಬಲ್ ಕೆ.ರಾಮಕೃಷ್ಣ ಅವರು ಕೂಡ ಇದ್ದು, ಪ್ರತ್ಯೇಕ ತಂಡಗಳಾಗಿ ಕಾರ್ಯಾಚರಣೆ ನಡೆಸಲಿದ್ದಾರೆ. ಕೊಡಗು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಗೃಹ ರಕ್ಷಕ ದಳ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಚೆಸ್ಕಾಂ, ಆರೋಗ್ಯ ಇಲಾಖೆ, ಜಲ ಕ್ರೀಡೆಯ ರ್‍ಯಾಫ್ಟರ್ ಗಳು, ಸ್ಥಳೀಯ ಗ್ರಾಮ ಪಂಚಾಯತ್ ಗಳು ಸೇರಿದಂತೆ ವಿವಿಧ ಇಲಾಖೆಗಳು ಎನ್‌ಡಿಆರ್‌ಎಫ್ ತಂಡದೊಂದಿಗೆ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಗೆ ಕೈ ಜೋಡಿಸಲಿವೆ.

ಮರ ಕಟಾವು ಯಂತ್ರಗಳು, ಹೈಡ್ರಾಲಿಕ್ ಕಟ್ಟರ್ ಗಳು, ಜನರೇಟರ್, ಆಕ್ಸಿಜನ್ ಸಿಲಿಂಡರ್ ಗಳು, ಫ್ಲೋಟಿಂಗ್ ಬೋಟ್‍ಗಳು, ನೈಲಾನ್ ಹಗ್ಗಗಳು, ಸ್ಟ್ರಚ್ಚರ್, ಮೆಡಿಕಲ್ ಕಿಟ್ ಸೇರಿದಂತೆ ಭೂ ಕುಸಿತ, ಪ್ರವಾಹ ಸಂದರ್ಭ ಜನ ಜಾನುವಾರು ರಕ್ಷಣೆಗೆ ಬೇಕಾದ ಎಲ್ಲಾ ಅಗತ್ಯ ರಕ್ಷಣಾ ಪರಿಕರಗಳನ್ನು ಹೊತ್ತು ತಂದಿದ್ದಾರೆ.

ಈ ಕುರಿತು ಮಾತನಾಡಿದ ಎನ್‌ಡಿಆರ್‌ಎಫ್ ಕಮಾಂಡಿಂಗ್ ಆಫೀಸರ್ ಬಬ್ಲು ಬಿಸ್ವಾಸ್, ನಮ್ಮ ತಂಡವನ್ನು ಕೊಡಗು ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಕಳೆದ 3 ವರ್ಷಗಳಿಂದ 10ನೇ ಎನ್‌ಡಿಆರ್‌ಎಫ್ ತಂಡವೇ ಕೊಡಗು ಜಿಲ್ಲೆಗೆ ಬರುತ್ತಿದ್ದು, ಮಡಿಕೇರಿ, ವಿರಾಜಪೇಟೆ, ಭಾಗಮಂಡಲ ಮತ್ತಿತರ ಕಡೆಗಳಲ್ಲಿ ರಕ್ಷಣಾ ಕಾರ್ಯ ನಡೆಸಿದ್ದೇವೆ ಎಂದು ಮಾಹಿತಿ ನೀಡಿದರು. 

ಮೊದಲಿಗೆ ಪ್ರಾಕೃತಿಕ ವಿಕೋಪ ಸಂಭವಿಸುವ ಸಾಧ್ಯತೆ ಇರುವ ಸೂಕ್ಷ್ಮ ಪ್ರದೇಶಗಳನ್ನು ಸರ್ವೆ ನಡೆಸುತ್ತೇವೆ. ಅಗತ್ಯವಿದ್ದಲ್ಲಿ ಅಲ್ಲಿನ ನಿವಾಸಿಗಳ ಸ್ಥಳಾಂತರ, ಪ್ರವಾಹ ಮುನ್ಸೂಚನೆ ಇದ್ದಲ್ಲಿ ಬೋಟ್‍ಗಳ ಸಹಾಯದಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತದೆ. ಈ ರಕ್ಷಣಾ ಕಾರ್ಯಾಚರಣೆಗೆ ಬೇಕಾಗುವ ಎಲ್ಲಾ ರೀತಿಯ ಯಂತ್ರೋಪಕರಣಗಳು, ಪರಿಕರಗಳು ನಮ್ಮ ಬಳಿ ಇವೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಒಂದು ತಂಡವನ್ನು ದಕ್ಷಿಣ ಕನ್ನಡದಲ್ಲೂ ಮತ್ತೊಂದು ತಂಡವನ್ನು ಬೆಂಗಳೂರಿನಲ್ಲಿ ನಿಯೋಜನೆ ಮಾಡಲಾಗಿದೆ. ಕೊಡಗು ಜಿಲ್ಲೆಗೆ ಮತ್ತಷ್ಟು ರಕ್ಷಣಾ ಸಿಬ್ಬಂದಿಗಳ ಅಗತ್ಯ ಕಂಡು ಬಂದಲ್ಲಿ ಆ ಸಿಬ್ಬಂದಿಗಳ ನೆರವನ್ನೂ ಪಡೆಯಲಾಗುತ್ತದೆ. 24 ಗಂಟೆಗಳ ಕಾಲ ನಮ್ಮ ಎನ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯಕ್ಕೆ ಸಿದ್ಧವಿದ್ದು, ಕೊಡಗು ಜಿಲ್ಲೆಯ ಜನರು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.

ಈ ಸಂದರ್ಭ ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಅನನ್ಯ ವಾಸುದೇವ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News