ಪುನರ್ಜನ್ಮ ಸಹಜ, ನಮ್ಮವರು ಹೋದರೆಂದು ನಿರಾಶರಾಗಬೇಡಿ: ಮೋಹನ್ ಭಾಗವತ್

Update: 2021-05-15 15:08 GMT

ಬೆಂಗಳೂರು, ಮೇ 15: ಭಾರತೀಯರಾದ ನಮಗೆ ಜನನ, ಮರಣ, ಪುನರ್ಜನ್ಮಗಳು ಸಹಜವೇ. ಹಾಗಾಗಿ, ನಮ್ಮವರನ್ನು ಕಳೆದುಕೊಂಡೆವೆಂದು ನಿರಾಶರಾಗಿ ಕುಳಿತುಕೊಳ್ಳುವುದು ಸರಿಯಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು.

ಶನಿವಾರ ಕೋವಿಡ್ ಸಂಬಂಧ ಪಾಸಿಟಿವಿಟಿ ಅನ್ಲಿಮಿಟೆಡ್ ವಿಷಯದ ಕುರಿತು ಉಪನ್ಯಾಸ ಮಾಲಿಕೆ ಐದನೆ ದಿನವನ್ನುದ್ದೇಶಿಸಿ ಮಾತನಾಡಿದ ಅವರು, ಭಾರತೀಯರಾದ ನಮಗೆ ಜನನ ಮರಣ ಪುನರ್ಜನ್ಮಗಳು ಸಹಜವೇ. ಎಲ್ಲರೂ ಒಂದು ದಿನ ಹೋಗುವವರೇ. ಹಾಗಾಗಿ, ನಮ್ಮವರನ್ನು ಕಳೆದುಕೊಂಡೆವೆಂದು ನಿರಾಶರಾಗಿ ಕುಳಿತುಕೊಳ್ಳುವುದು ಸರಿಯಲ್ಲ ಎಂದು ನುಡಿದರು.

ಕೋವಿಡ್‍ನಲ್ಲಿ ಅನೇಕ ಕುಟುಂಬಗಳು ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿವೆ. ಹಲವು ಕಡೆಗಳಲ್ಲಿ ದುಡಿಯುವ ಕೈಗಳೇ ಇಲ್ಲವಾಗಿವೆ. ಇಂತಹ ಕುಟುಂಬಗಳಿಗೆ ಸಾಂತ್ವನ ಹೇಳಬೇಕಾದ್ದು ನಮ್ಮೆಲ್ಲರ ಮೊದಲ ಜವಾಬ್ದಾರಿ. ಕೋವಿಡ್ ಬಹಳ ದೊಡ್ಡ ಸವಾಲು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅದರ ಬಗ್ಗೆ ಚಿಂತಿಸುತ್ತಾ ನಾವು ಮಾನಸಿಕವಾಗಿ ದುರ್ಬಲರಾಗಬಾರದು ಎಂದರು.

ಈ ರೀತಿಯ ಸಾಂಕ್ರಾಮಿಕಗಳು ಈ ಮೊದಲೂ ನಮ್ಮನ್ನು ಬಾಧಿಸಿವೆ. ಸಂಘ ಸ್ಥಾಪಕರಾದ ಡಾ.ಹೆಡಗೇವಾರ್ ಅವರ ಬಾಲ್ಯದಲ್ಲಿಯೇ ಅವರ ಪೋಷಕರು ಸಾಂಕ್ರಾಮಿಕ ರೋಗಕ್ಕೆ ಬಲಿಯಾದರು. ಆದರೆ, ಇದರಿಂದ ಅವರ ಮನಸ್ಸು ದೃಢವಾಯಿತು. ಈ ಸಮಾಜದ ಬಗ್ಗೆ ಕಹಿ ಭಾವನೆ ಅವರಲ್ಲಿರಲಿಲ್ಲ ಎಂದು ಹೇಳಿದರು.

ಮಕ್ಕಳ ಶಿಕ್ಷಣ ಈ ವರ್ಷವೂ ಸ್ವಲ್ಪ ಏರುಪೇರಾಗಬಹುದು. ಪರೀಕ್ಷೆ, ಅಂಕಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮನೆಯಲ್ಲೇ ಅವರಿಗೆ ಸಾಧ್ಯವಾದಷ್ಟು ಶಿಕ್ಷಣ ಕೊಡೋಣ. ಅನೇಕರಿಗೆ ಉದ್ಯೋಗಕ್ಕೆ ತೊಂದರೆಯಾಗಿದೆ. ಇದರಿಂದ ನಮ್ಮ ಆರ್ಥಿಕತೆಗೆ ತೊಂದರೆಯಾಗಲಿದೆ. ಉದ್ಯೋಗದ ಅಗತ್ಯವಿರುವವರಿಗೆ ಕೌಶಲ್ಯ ತರಬೇತಿ ಕೊಡುವ ಮೂಲಕ, ಆರ್ಥಿಕ ಸಂಕಷ್ಟಕ್ಕೊಳಗಾದವರಿಂದ ಖರೀದಿ ಮಾಡುವ ಮೂಲಕ ನಮ್ಮ ಆರ್ಥಿಕತೆಗೆ ಬಳ ತುಂಬಬಹುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News